ನಿಮ್ಮನ್ನ ಸಿಎಂ ಮಾಡಿದವರನ್ನ ಕೈಬಿಡಬೇಡಿ, ಅನರ್ಹರನ್ನು ತಬ್ಬಲಿ ಮಾಡ್ಬೇಡಿ: ಬಿಎಸ್‌ವೈಗೆ ಡಿಕೆಶಿ ಟಾಂಗ್

ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣರಾಗಿರುವ ಅನರ್ಹ ಶಾಸಕರನ್ನು ಅವರು ಯಾವುದೇ ಕಾರಣಕ್ಕೂ ಕೈಬಿಡಬಾರದು ಅನರ್ಹರನ್ನು ತಬ್ಬಲಿ ಮಾಡಬಾರದು....
ಡಿಕೆಶಿ ಹಾಗೂ ಬಿಎಸ್‌ವೈ
ಡಿಕೆಶಿ ಹಾಗೂ ಬಿಎಸ್‌ವೈ
ಬೆಂಗಳೂರು: ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರಣರಾಗಿರುವ ಅನರ್ಹ ಶಾಸಕರನ್ನು ಅವರು ಯಾವುದೇ ಕಾರಣಕ್ಕೂ ಕೈಬಿಡಬಾರದು  ಅನರ್ಹರನ್ನು ತಬ್ಬಲಿ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಸಲಹೆ ನೀಡಿದ್ದಾರೆ
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅನರ್ಹ ಶಾಸಕರು ಮುಂಬೈಗೆ ಹೋಗಿದ್ದರಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿ ಗಾದಿಗೇರಲು ಕಾರಣರಾಗಿರುವ ಅನರ್ಹರನ್ನು ಕೈಬಿಡದೇ ಅವರು  ತಮ್ಮೊಂದಿಗೆ ಕರೆದುಕೊಂಡು ಹೋಗಬೇಕು ಎಂದು ವ್ಯಂಗ್ಯವಾಡಿದರು.
ಆಪರೇಷನ್ ಕಮಲಕ್ಕೆ ಶಾಸಕರನ್ನು ಸೆಳೆದುಕೊಳ್ಳುವಾಗ ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ, ಅವರಿಗೆ ಏನೇನು ಕೊಡುತ್ತೇವೆ ಎಂದು ಹೇಳಿದ್ದರೋ ಅದೆಲ್ಲವನ್ನು ನೀಡಬೇಕು. ನಡುನೀರಿನಲ್ಲಿ ಅವರನ್ನು ಕೈಬಿಡದೇ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ವಿಪ್ ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದು ಹೇಳಿರುವ ಯಡಿಯೂರಪ್ಪ ತಮ್ಮ ಪಕ್ಷದ ಶಾಸಕರಿಗೆ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ವಿಪ್ ನೀಡಿದ್ದಾದರೂ ಏಕೆ ಎಂದು ತಿರುಗೇಟು ನೀಡಿದರು. 
ಸ್ಪೀಕರ್ 17 ಶಾಸಕರನ್ನು ಅನರ್ಹಗೊಳಿಸಿರುವ ಕ್ರಮ ಕಾಂಗ್ರೆಸ್ ಜೆಡಿಎಸ್ ಪಕ್ಷಗಳಿಗಷ್ಟೇ ಅಲ್ಲ ಬಿಜೆಪಿಗೂ ಲಾಭದಾಯಕವಾಗಿದೆ. ಒಂದುವೇಳೆ ಅವರು ಅನರ್ಹರಾಗದಿದ್ದಿದ್ದರೆ ಆ ಶಾಸಕರನ್ನು ಯಡಿಯೂರಪ್ಪ ಅವರು ಸಂಪುಟಕ್ಕೆ ಸೇರಿಸಿಕೊಳ್ಳಬೇಕಿತ್ತು. ಇದು ಬಿಜೆಪಿಯಲ್ಲಿನ ಸಚಿವಾಕಾಂಕ್ಷಿಗಳಿಗೂ ಇಷ್ಟವಿರಲಿಲ್ಲ. ಮೇಲ್ನೋಟಕ್ಕೆ ಸ್ಪೀಕರ್ ಕ್ರಮವನ್ನು ಟೀಕಿಸುವಂತೆ ಬಿಜೆಪಿ ನಾಯಕರು ಪ್ರತಿಕ್ರಿಯಿಸುತ್ತಿದ್ದಾರಾದರೂ ಯಡಿಯೂರಪ್ಪ ಅವರಿಗೆ ಸಂಪುಟ ರಚನೆಯಲ್ಲಿ ಅತೃಪ್ತರಿಂದ ಆಗಬಹುದಾದ ತೊಂದರೆ ತಪ್ಪಿದಂತಾಗಿದೆ. 
ಕೆಲವು ದಿನಗಳ ಹಿಂದೆ ಅತೃಪ್ತ ಶಾಸಕರಿಗೆ ಯಡಿಯೂರಪ್ಪ ಸಚಿವ ಸ್ಥಾನ ನೀಡದೇ ಇದ್ದರೆ ಅವರು ಯಡಿಯೂರಪ್ಪ ಅವರನ್ನು ಹರಿದು ತಿನ್ನುತ್ತಾರೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು. ಇದೀಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 
ಹೀಗಾಗಿ ಡಿ.ಕೆ.ಶಿವಕುಮಾರ್ ಪದೇಪದೇ ಅನರ್ಹರನ್ನು ಬಿಜೆಪಿ ಕೈಬಿಡಬಾರದು ಎಂದು ಒತ್ತಿ ಹೇಳುತ್ತಿರುವ  ಅವರ ಮಾತುಗಳು ಅನರ್ಹ ಶಾಸಕರನ್ನು ಬಿಜೆಪಿ ವಿರುದ್ಧ ಪ್ರಚೋದಿಸುತ್ತಿರುವ ತಂತ್ರವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com