ಆಪರೇಷನ್ ಕಮಲಕ್ಕೇ ಆಪರೇಷನ್; ಬಿಜೆಪಿ ಶಾಸಕರು, ಸಿಎಂ ಕುಮಾರಸ್ವಾಮಿ, ಭೇಟಿ ಫೋಟೋ ವೈರಲ್

ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಅಥವಾ ತೆನೆ ಮಾಡಲು ಮೈತ್ರಿ ನಾಯಕರು ಸಿದ್ಧತೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ಆಪರೇಷನ್ ಹಸ್ತ ಅಥವಾ ತೆನೆ ಮಾಡಲು ಮೈತ್ರಿ ನಾಯಕರು ಸಿದ್ಧತೆ ನಡೆಸಿದ್ದಾರೆ.
ಬಿಜೆಪಿಯ ಶಿರಗುಪ್ಪ ಶಾಸಕ ಸೋಮಲಿಂಗಪ್ಪ, ಹಿಂದೆ ಜೆಡಿಎಸ್ ಶಾಸಕರಾಗಿದ್ದ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಸುರಪುರ ಬಿಜೆಪಿ ಶಾಸಕ ರಾಜೂಗೌಡ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಅವರೊಂದಿಗೆ ಕಾಂಗ್ರೆಸ್ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಹೊತ್ತಿಗೆ ಶಾಸಕ ಬಸವರಾಜ್ ದಡೇಸಗೂರು ಅವರು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿರುವ ಫೋಟೋವೊಂದು ವೈರಲ್ ಆಗಿರುವುದು ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. 
ಶನಿವಾರ ವೆಂಕಟರಾವ್ ನಾಡಗೌಡ ಅವರ ಸಮ್ಮುಖದಲ್ಲಿ ಬಸವರಾಜ್ ದಡೇಸಗೂರ್ ಸಿಎಂ ಜೊತೆ ಕೈ ಕುಲುಕಿರುವ ಫೋಟೋ ಹಲವು ಜಿಲ್ಲೆಯ ಕಮಲ ಅಂಗಳದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಕಳೆದ ಹಲವು ದಿನಗಳಿಂದ ಬಸವರಾಜ್ ತೊರೆಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಒಂದು ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ. ಕೇವಲ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಲದು ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಬಿಜೆಪಿಯ ಎಂಎಲ್‍ಎ ಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಈ ಸುದ್ದಿಯ ಬೆನ್ನಲ್ಲೆ ಬಸವರಾಜ್ ದಡೇಸಗೂರ್ ಫೋಟೋ ವೈರಲ್ ಆಗಿದೆ.
ಮಾಧ್ಯಮವೊಂದರ ವರದಿ ಅನ್ವಯ, ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್, ಸುರಪುರ ಶಾಸಕ ರಾಜುಗೌಡ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಮತ್ತು ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್‍ಗೆ ಕೈ ಗಾಳ ಹಾಕಿದೆ. ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುರಪುರ ಶಾಸಕ ರಾಜುಗೌಡ, ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರಿಂದ ಕಳೆದ ಕೆಲ ದಿನಗಳಿಂದ ಮೊಬೈಲ್ ಸ್ವಿಚ್ಛ್ ಆಫ್ ಅಗಿತ್ತು. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com