ಪಕ್ಷದ ಬಗ್ಗೆ ತಿಳುವಳಿಕೆ ಇಲ್ಲದವರಿಗೆ ಮಣೆ ಹಾಕಿದ್ದೇ ಕಾಂಗ್ರೆಸ್‍ನ ಈ ಸ್ಥಿತಿಗೆ ಕಾರಣ: ರಾಮಲಿಂಗಾ ರೆಡ್ಡಿ

ಪಕ್ಷದ ಕುರಿತು ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ....
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ
ಬೆಂಗಳೂರು: ಪಕ್ಷದ ಕುರಿತು  ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಏಕೈಕ ಸ್ಥಾನ ಗಳಿಸುವ ಮೂಲಕ ಕಳಪೆ ಸಾಧನೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ರಾಮಲಿಂಗಾ ರೆಡ್ಡಿ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.
ರೆಡ್ಡಿ ತಾವು ಸರಣಿ ಟ್ವೀಟ್ ಮಾಡುವ ಮೂಲಕ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ. "ಪಕ್ಷದ ಬಗ್ಗೆ ಅರಿವಿರದ ಹೊಸಬರಿಗೆ ಮಣೆ ಹಾಕಿರುವುದೇ ಕಾಂಗ್ರೆಸ್‍ನ ಇಂದಿನ ಸ್ಥಿತಿಗೆ ಕಾರಣವಾಗಿದೆ. ಸಚಿವರು, ನಾಯಕರಲ್ಲಿದ್ದ ಅಂಘಟನಾ ಕೊರತೆ, ಕಾರ್ಯಕರ್ತರು-ನಾಯಕರ ನಡುವಿನ ಅಂತರಗಳು ಚುನಾವಣೆಯಲ್ಲಿ ಕಾಂಗ್ರೆಸ್ ಈ ರೀತಿ ಹೀನಾಯ ಸೋಲು ಕಾಣುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ರಾಮಲಿಂಗಾ ರೆಡ್ಡಿಯವರ ಸರಣಿ ಟ್ವಿಟ್ ಹೀಗಿದೆ-
"ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರ ಕಡೆಗಣನೆ ಹಾಗೂ ಕೆಲವು ಕಾಂಗ್ರೆಸ್ ಸಚಿವರ ಸಂಘಟನಾ ದೂರದೃಷ್ಟಿತ್ವ ಕೊರತೆಯಿಂದಾಗಿ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಹಿರಿಯರು ನೀಡಿದ ಸಲಹೆಗಳನ್ನು ಪರಿಗಣಿಸದೇ ಇರುವುದು, ಕೆಲವು ಸಚಿವರ ಕಾರ್ಯಕ್ಷಮತೆಯೂ ಸಹ ಪಕ್ಷಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣವಾಯಿತು
"ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದಲ್ಲಿ ಪಕ್ಷದ ಕುರಿತು  ಏನೂ ಅರಿವಿಲ್ಲದೇ ಬಂದ ಹೊಸಬರಿಗೆ,ವಲಸಿಗರಿಗೆ ಮಣೆ ಹಾಕಿದ್ದೇ ಇಂದಿನ ಈ ಪರಿಸ್ಥಿತಿಗೆ ಕಾರಣ. ರಾಜ್ಯದ ಮುಂಚೂಣಿ ನಾಯಕರು ಹಾಗೂ ಉಸ್ತುವಾರಿಗಳು ಪಕ್ಷದ ಆಂತರಿಕ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಎಡವಿದ್ದಾರೆ.
"ನಮ್ಮ ಸರ್ಕಾರವಿದ್ದೂ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಉತ್ಸಾಹ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಸ್ಥಾನದಲ್ಲಿರುವ ಕೆಲವು ಕಾಂಗ್ರೆಸ್ ಸಚಿವರು ಹಾಗೂ ಕಾಂಗ್ರೆಸ್  ಕಾರ್ಯಕರ್ತರ ಮಧ್ಯೆ ಯಾವುದೇ ಉತ್ತಮ ಭಾಂಧವ್ಯ, ಸಂವಹನ ಇಲ್ಲದಿರುವುದು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರ ನಿರ್ಲಕ್ಷ ಕಾರಣವಾಗಿದೆ. 
"ಈ ಕುರಿತು ಹಲವು ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ  ಸವಾಲಿನ ದಿನಗಳನ್ನು ಎದುರಿಸಲು, ಪಕ್ಷ ಹಾಗೂ ಸರ್ಕಾರದಲ್ಲಿ ಹಿರಿಯರ ಕಡೆಗಣನೆ ಸರಿದೂಗಿಸಬೇಕಾಗಿದೆ.
"ಸರ್ಕಾರದಲ್ಲಿ ಹಿರಿಯರಿಗೆ ಪ್ರಾತಿನಿಧ್ಯ ನೀಡುವಂತಾಗಲು ಕಾಂಗ್ರೆಸ್ ಪಕ್ಷದ ಹಿರಿಯರೆಲ್ಲರೂ ಒಂದೆಡೆ ಸೇರಿ ಪಕ್ಷದ ಹಿತ ಸಮಾಲೋಚಿಸಬೇಕಾಗಿದೆ. ಜೊತೆಗೆ ಹಿರಿಯರು ಯಾರೂ ಪಕ್ಷ ಬಿಡದಂತೆ ಎಚ್ಚರಿಕೆವಹಿಸಬೇಕಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಹಿರಿಯ ನಾಯಕರು ಪಕ್ಷದಲ್ಲಿ ಮುಂದುವರೆಯುವುದು ಕಷ್ಟ ಸಾಧ್ಯವಾದೀತು.
"ಪಕ್ಷದ ಪರ ಚುನಾವಣಾ ಫಲಿತಾಂಶದಲ್ಲಿ ಎಡವಿದ ಸಚಿವರಿಗೆ ಪಕ್ಷ ಸಂಘಟನಾ ಜವಾಬ್ದಾರಿ ನೀಡುವುದರ ಜೊತೆಗೆ ಹಿರಿಯರಿಗೆ ಸರ್ಕಾರದಲ್ಲಿ ಸ್ಥಾನಮಾನ ನೀಡಿ ಪಕ್ಷದ ಆಂತರಿಕ ಅಸಮತೋಲನವನ್ನು ಸರಿಪಡಿಸುವ ಕಾರ್ಯವನ್ನು,  ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ನಾಯಕರು ಗಮನ ಹರಿಸಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com