ಮೇಕೆದಾಟು, ಉಪನಗರ ರೈಲು ಯೋಜನೆ ಬಗ್ಗೆ ಮಾಹಿತಿ ಇರಲಿಲ್ಲ: ಸದಾನಂದಗೌಡ ಯೂ-ಟರ್ನ್

ಬೆಂಗಳೂರು ಉಪ ನಗರ ರೈಲು ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ...
ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ
ಬೆಂಗಳೂರು: ಬೆಂಗಳೂರು ಉಪ ನಗರ ರೈಲು ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿ(ಡಿಪಿಆರ್) ಕಾರ್ಯಸಾಧ್ಯತಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿ ತಮಗೆ ಇರಲಿಲ್ಲ ಎನ್ನುವ ಮೂಲಕ ಕೇಂದ್ರ ಸಚಿವ ಸದಾನಂದಗೌಡ ಯೂಟರ್ನ್ ಹೊಡೆದಿದ್ದಾರೆ.
ಸೋಮವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ವೇಳೆ ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ಮೇಕೆದಾಟು ಹಾಗೂ ಉಪನಗರ ರೈಲ್ವೆ ಯೋಜನಾ ವರದಿಗಳನ್ನು ಸಲ್ಲಿಸಿಲ್ಲವೆಂದು ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದರು.
ಕೇಂದ್ರ ಸಚಿವರ ಆರೋಪಕ್ಕೆ ಸಂಜೆ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗೂ ಇಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ. ಮೇಕೆದಾಟು ಯೋಜನೆ ಡಿಪಿಆರ್ ಸಲ್ಲಿಸಿ 5 ತಿಂಗಳಾಗಿದೆ. ಅಂತೆಯೇ ಕಾರ್ಯಸಾಧ್ಯತಾ ವರದಿ ಸಲ್ಲಿಸಿ ಒಂದು ತಿಂಗಳು ಕಳೆದಿದೆ ಸಚಿವರಿಗೆ ಮಾಹಿತಿ ಇಲ್ಲದಿದ್ದಲ್ಲಿ ಅವರ ಸಮಾಯಾವಕಾಶ ಪಡೆದು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ ಎಂದು ಸಚಿವ ಡಿಕೆ ಶಿವಕುಮಾರ್ ನೇರವಾಗಿಯೇ ತಿರುಗೇಟು ನೀಡಿದ್ದರು.
ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಜಿಕ ಜಾಲ ತಾಣದಲ್ಲಿ ಟ್ವೀಟ್ ಮಾಡುವ ಮೂಲಕ ರಾಜಕಾರಣ ಮಾಡುವುದನ್ನು ಬಿಡಿ. ಮೇಕೆದಾಟು ಹಾಗೂ ಉಪನಗರ ರೈಲು ಯೋಜನೆಗೆ ಎಲ್ಲಾ ವಿವರ ಸಲ್ಲಿಸಿದ್ದೇವೆ. ಉಪನಗರ ರೈಲು ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಸದಾನಂದಗೌಡರ ಆರೋಪಗಳನ್ನು ತಳ್ಳಿ ಹಾಕಿದ್ದರು.
ಸದಾಶಿವನಗರದ ರಾಷ್ಟ್ರೋತ್ಥಾನ ಪರಿಷತ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ರಾಜ್ಯ ಸರ್ಕಾರದಿಂದ ಉಪ ನಗರ ರೈಲು ಯೋಜನೆ ಹಾಗೂ ಮೇಕೆದಾಟು ಯೋಜನೆಗೆ ವಿಸ್ತೃತ ವರದಿ ಸಲ್ಲಿಕೆ ಮಾಡಿದ್ದರೆ ಅದನ್ನು ಸ್ವಾಗತಿಸುತ್ತೇನೆ. ರಾಜ್ಯ ಸರ್ಕಾರ ಕೇಂದ್ರದ ಇಲಾಖೆಗೆ ವರದಿ ಸಲ್ಲಿಸಿರುವ ಮಾಹಿತಿ ತಮ್ಮ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಮಾಹಿತಿ ಪಡೆಯುತ್ತೇನೆ ಎಂದು ಮುಜುಗರ ತಪ್ಪಿಸಿಕೊಳ್ಳಲು ಯತ್ನಿಸಿದರು.
ವರದಿ ಸಲ್ಲಿಸಿರುವ ಬಗ್ಗೆ ಜಲ ಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಮ್ಮ ನಿನ್ನೆಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು. ರಾಜಕಾರಣಕ್ಕೋಸ್ಕರ ನಾನು ಹೀಗೆ ಮಾತನಾಡಿಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com