ರಾಜ್ಯ ಕಾಂಗ್ರೆಸ್ ಅಸಮಾಧಾನ ಶಮನಕ್ಕೆ ರಾಹುಲ್ ಮಧ್ಯಪ್ರವೇಶಿಸಲಿ: ಹೆಚ್.ಕೆ. ಪಾಟೀಲ್

ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯನಿರ್ವಹಣೆ ಕುರಿತು ಪಕ್ಷದ ನಾಯಕರು ವ್ಯಕ್ತಪಡಿಸಿರುವ ಅಸಮಧಾನ ಶಮನಗೊಳಿಸಲು ಎಐಸಿಸಿ...
ಹೆಚ್ ಕೆ ಪಾಟೀಲ್
ಹೆಚ್ ಕೆ ಪಾಟೀಲ್
ಬೆಂಗಳೂರು: ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯನಿರ್ವಹಣೆ ಕುರಿತು ಪಕ್ಷದ ನಾಯಕರು ವ್ಯಕ್ತಪಡಿಸಿರುವ ಅಸಮಧಾನ ಶಮನಗೊಳಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಅವರು ಬುಧವಾರ ಹೇಳಿದ್ದಾರೆ.
ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಶೈಲಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ರಾಜ್ಯ ನಾಯಕರೇ ಕಾರಣ ಎಂದು ಅಸಮಧಾನ ವ್ಯಕ್ತಪಡಿಸಿರುವ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ ಹಾಗೂ ರೋಷನ್ ಬೇಗ್ ಹೇಳಿಕೆಗಳನ್ನು ಉಲ್ಲೇಖಿಸಿದ ಹೆಚ್.ಕೆ. ಪಾಟೀಲ್, ರಾಹುಲ್ ಗಾಂಧಿ ಅವರು ಮಧ್ಯ ಪ್ರವೇಶಿಸಿ, ರಾಜ್ಯನಾಯಕರೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ರೂಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಪಾಟೀಲ್, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಸಿದ್ಧರಾಮಯ್ಯ ಅವರೊಬ್ಬರನ್ನೇ ಹೊಣೆಯಾಗಿಸುವುದು ಸರಿಯಲ್ಲ, ಪ್ರತಿಯೊಬ್ಬ ನಾಯಕರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಲ್ಲ ಹಿರಿಯ ನಾಯಕರು ಪಕ್ಷ ಬಲಪಡಿಸಲು ಒಗ್ಗಟ್ಟನಿಂದ ಶ್ರಮಿಸಬೇಕು. ಚುನಾವಣೆಯ ಸೋಲಿನ ನಂತರ ಈ ಕೆಲಸವನ್ನು ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಮನವಿಮಾಡಿದ್ದಾರೆ.
ಎಲ್ಲ ಪಕ್ಷಗಳಲ್ಲೂ ಸಣ್ಣ ಪುಟ್ಟ ಭಿನ್ನಾಬಿಪ್ರಾಯಗಳು ಸಾಮಾನ್ಯ, ಆದರೆ ಅವುಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಮಾಧ್ಯಮಗಳ ಮುಂದೆ ಹೋಗುವುದರಿಂದ ಸಮಸ್ಯೆ ಬಗೆಹರಿಯದು. ಇದನ್ನು ಪಕ್ಷದ ಪ್ರತಿಯೊಬ್ಬ ನಾಯಕರು ಅರ್ಥಮಾಡಿಕೊಳ್ಳಬೇಕು ಎಂದು ಪಾಟೀಲ್ ಕಿವಿಮಾತು ಹೇಳಿದ್ದಾರೆ.
ಜಿಂದಾಲ್ ಉಕ್ಕು ಕಾರ್ಖಾನೆಗೆ 3,666 ಎಕರೆ ಭೂಮಿ ನೀಡುವ ರಾಜ್ಯ ಸಚಿವ ಸಂಪುಟ ನಿರ್ಧಾರ ಸರಿಯಾದುದಲ್ಲ ಎಂದು ಪಾಟೀಲ್ ಪುನರುಚ್ಚರಿಸಿದರು. ರಾಜ್ಯ ಸರ್ಕಾರಕ್ಕೆ ಜಿಂದಾಲ್ ಉಕ್ಕು ಸಂಸ್ಥೆ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ ಎಂಬ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಕಂಪನಿ ರಾಜ್ಯ ಸರ್ಕಾರಕ್ಕೆ ಹಣ ಬಾಕಿ ಉಳಿಸಿಕೊಂಡಿದೆ, ಈ ಕುರಿತು ದಾಖಲೆಗಳ ಸಮೇತ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಸಮರ್ಥಿಸಿಕೊಂಡ ಹೆಚ್.ಕೆ. ಪಾಟೀಲ್, ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com