ಆಂತರಿಕ ಭಿನ್ನಾಭಿಪ್ರಾಯ ಶಮನ, ಪಕ್ಷ ಸಂಘಟನೆಗೆ ಒತ್ತು- ದಿನೇಶ್ ಗುಂಡೂರಾವ್

ಪಕ್ಷ ಹಾಗೂ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು, ಎಲ್ಲರೂ ಸೇರಿ ಪಕ್ಷ ಕಟ್ಟ ಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು:  ಪಕ್ಷ ಹಾಗೂ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಬಗೆಹರಿಯಲಿದ್ದು, ಎಲ್ಲರೂ ಸೇರಿ ಪಕ್ಷ ಕಟ್ಟ ಬೇಕಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವಿರುದ್ಧ ಹಾಗೂ ನಾಯಕರ ವಿರುದ್ಧ ಮಾತನಾಡುವುದು ಬೇಡ ಎಂದು ಮಾಜಿ ಶಾಸಕ ಕೆಎನ್ ರಾಜಣ್ಣ ಅವರಿಗೆ ಸೂಚಿಸಿದ್ದೇನೆ. ನಿನ್ನೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆಗೆ ಕರೆಸಿ ಮಾತನಾಡಿದ್ದೇವೆ. ಪರಮೇಶ್ವರ್ ವಿರುದ್ಧ  ಮಾತನಾಡಿದದ್ದು ಸರಿಯಲ್ಲ. ಇದರಿಂದ ಪಕ್ಷ ಸಂಘಟನೆಗೆ ತೊಂದರೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ. ಹೀಗಾಗಿ ಇಂದು ಕೆಪಿಸಿಸಿ ಕಚೇರಿಗೆ ಬಂದು ಕೆಎನ್ ರಾಜಣ್ಣ ಕ್ಷಮೆ ಕೋರಿದ್ದಾರೆ ಎಂದು ಹೇಳಿದರು.
 ಪಕ್ಷ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದೇವೆ. ತಮ್ಮ ಹೇಳಿಕೆಗಳಿಂದ ಪರಮೇಶ್ವರ್ ಅವರಿಗೆ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ಅವರ ವಿರುದ್ಧ ನೀಡಿರುವ ಹೇಳಿಕೆ ವಾಪಾಸ್ ಪಡೆಯುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ ಎಂದು ದಿನೇಶ್ ಗುಂಡೂರಾವ್  ತಿಳಿಸಿದರು.
ಮಂತ್ರಿ ಮಂಡಲ ಪುನರ್ ರಚನೆಯಾದರೆ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಅಮರೇಗೌಡ ಬಯ್ಯಾಪುರ, ವಿ. ಮುನಿಯಪ್ಪ ಅವರಿಗೆ ಸಚಿವ ಸ್ಥಾನ ದೊರೆಯಲಿದೆ. ಸಂಪುಟ ವಿಸ್ತರಣೆಯಾದರೆ ಇಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ ಎಂದು ಹೇಳಿದರು.
ರೋಷನ್ ಬೇಗ್  ಪಕ್ಷದ ಶಿಸ್ತು ಉಲ್ಲಂಘಿಸಿ ಪಕ್ಷಕ್ಕೆ ಮುಜುಗರವ ಉಂಟುಮಾಡುವ ಹೇಳಿಕೆಗಳನ್ನು ನೀಡಿದ್ದಾರೆ. ಈ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು, ಬೇಗ್ ಅವರು ಎಐಸಿಸಿ ಸದಸ್ಯರೂ ಆಗಿದ್ದು, ಈ ಬಗ್ಗೆ ವರಿಷ್ಠರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com