ಜೂನ್ 12 ಕ್ಕೆ ಸಂಪುಟ ವಿಸ್ತರಣೆ: ಪಕ್ಷೇತರರಿಗೆ ಒಂದು ಸ್ಥಾನ ಬಿಟ್ಟುಕೊಟ್ಟ ಜೆಡಿಎಸ್, ಅತೃಪ್ತರ ನಡೆ ನಿಗೂಢ

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 12 ರಂದು ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಲಿದ್ದು,...

Published: 08th June 2019 12:00 PM  |   Last Updated: 08th June 2019 05:05 AM   |  A+A-


Ramalinga reddy

ರಾಮಲಿಂಗಾ ರೆಡ್ಡಿ

Posted By : SD SD
Source : Online Desk
ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಇದೇ ತಿಂಗಳ 12 ರಂದು ಬೆಳಿಗ್ಗೆ 11.30 ಕ್ಕೆ ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಲಿದ್ದು, ಪಕ್ಷೇತರರು ಸಂಪುಟ ಸೇರುವ ಸಾಧ್ಯತೆ ದಟ್ಟವಾಗಿದೆ.

ಸಂಪುಟ ವಿಸ್ತರಣೆ ಬಗ್ಗೆ ಸ್ವತಃ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ರಾಜ್ಯಪಾಲರನ್ನು ಶನಿವಾರ ಭೇಟಿಯಾಗಿದ್ದ ಕುಮಾರಸ್ವಾಮಿ, ಜೂನ್ 12 ರಂದು ಮಂತ್ರಿ ಮಂಡಲ ವಿಸ್ತರಣೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಅತೃಪ್ತ ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಂಡು, ಆಪರೇಷನ್ ಕಮಲದಿಂದ ಬಚಾವ್ ಆಗಲು ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ಬಗ್ಗೆ ಮೈತ್ರಿ ನಾಯಕರು ಇತ್ತೀಚೆಗೆ ಹಲವು ಸುತ್ತಿನ ಸಮಾಲೋಚನೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಹಲವು ಹಿರಿಯ ಕಾಂಗ್ರೆಸ್ ನಾಯಕರು ಸಚಿವ ಸಂಪುಟ ಪುನರ್ ರಚನೆಗೆ ಒತ್ತಾಯಿಸಿದ್ದರು. ಹೀಗಾಗಿ ಸಂಪುಟ ಪುನಾರಚನೆಯೋ ವಿಸ್ತರಣೆಯೋ ಎನ್ನುವ ಗೊಂದಲ ತಲೆದೋರಿತ್ತು. ಸಂಪುಟ ಪುನಾರಚನೆ ಮಾಡಿದಲ್ಲಿ ಅಸಮಾಧಾನದ ಜೇನುಗೂಡಿಗೆ ಕೈಹಾಕಿದಂತಾಗುತ್ತದೆ ಎನ್ನುವುದನ್ನು ಮನಗಂಡ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದೆ.

ಕಾಂಗ್ರೆಸ್-ಜೆಡಿಎಸ್ ನಲ್ಲಿ ಹಲವು ಶಾಸಕರು ಮಂತ್ರಿ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಕೆಲವರು ಬಹಿರಂಗವಾಗಿಯೇ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸರ್ಕಾರದ ಬಗ್ಗೆ ಟೀಕೆ ಮಾಡುವ ಮೂಲಕ ಸಂಪುಟ ಸೇರಲು ಒತ್ತಡ ಹೇರುತ್ತಿದ್ದಾರೆ. ಆದರೆ ಆಕಾಂಕ್ಷಿಗಳನ್ನು ತೃಪ್ತಿಪಡಿಸುವಷ್ಟು ಸ್ಥಾನಗಳು ಸದ್ಯಕ್ಕೆ ಮಂತ್ರಿಮಂಡಲದಲ್ಲಿ ಖಾಲಿ ಇಲ್ಲ. ಒಬ್ಬರಿಗೆ ಸ್ಥಾನ ನೀಡಿದರೆ ಮತ್ತೊಬ್ಬರ ಕಣ್ಣು ಕೆಂಪಗಾಗುವಂತಹ ಸ್ಥಿತಿ ಇದೆ. ಹೀಗಾಗಿ ಯಾರಿಗೂ ಸಚಿವ ಸ್ಥಾನ ನೀಡುವುದು ಬೇಡ ಎಂಬ ತಿರ್ಮಾನಕ್ಕೆ ಬಂದಿದ್ದಾರೆ.

ಹೀಗಾಗಿ ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಒಂದೆಡೆ ಸಧ್ಯಕ್ಕೆ ಆಪರೇಷನ್ ಕಮಲದ ಹೊಡೆತ ತಪ್ಪಿಸಿಕೊಳ್ಳುವ ಹಾಗೂ ಇನ್ನೊಂದೆಡೆ ಈಗಿರುವ ಸಂಪುಟವನ್ನೇ ಮುಂದುವರೆಸಿಕೊಂಡು ಹೋಗುವ ಸಮತೋಲನದ ತಂತ್ರಗಾರಿಕೆಯನ್ನು ಕಾಂಗ್ರೆಸ್-ಜೆಡಿಎಸ್ ನಾಯಕರು ರೂಪಿಸಿದ್ದಾರೆ.

ಪಕ್ಷೇತರರಿಗೆ ಒಂದು ಸ್ಥಾನ ಬಿಟ್ಟುಕೊಟ್ಟ ಜೆಡಿಎಸ್:
ಸಂಪುಟದಲ್ಲಿ ಕಾಂಗ್ರೆಸ್ ನಿಂದ 1, ಜೆಡಿಎಸ್ ನಿಂದ 2 ಸ್ಥಾನಗಳು ಖಾಲಿ ಉಳಿದಿವೆ. ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಕೋಟಾದಲ್ಲಿರುವ 2 ಸ್ಥಾನಗಳ ಪೈಕಿ ಒಂದನ್ನು ಪಕ್ಷೇತರರಿಗೆ ಬಿಟ್ಟುಕೊಟ್ಟಿದ್ದರೆ, ಇತ್ತ ಕಾಂಗ್ರೆಸ್ ಸಹ ಪಕ್ಷದಿಂದ ಯಾರನ್ನೂ ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ. ಪಕ್ಷೇತರರಿಗೆ ತನ್ನ ಬಳಿಯಿರುವ ಏಕೈಕ ಸ್ಥಾನವನ್ನು ನೀಡುತ್ತಿದೆ. ಬಳಿಕ ಜೆಡಿಎಸ್ ನಲ್ಲಿ ಒಂದು ಸ್ಥಾನ ಮಾತ್ರ ಬಾಕಿ ಉಳಿಯಲಿದ್ದು, ಸದ್ಯಕ್ಕೆ ಜೆಡಿಎಸ್ ನಿಂದಲೂ ಸಂಪುಟಕ್ಕೆ ಯಾರೂ ಸೇರುತ್ತಿಲ್ಲ ಎನ್ನಲಾಗಿದೆ.

ಜನವರಿಯಲ್ಲಿ ಕಾಂಗ್ರೆಸ್ ಗೆ ನೀಡಿದ ಬೆಂಬಲ ವಾಪಸ್ ಪಡೆದಿದ್ದ ಪಕ್ಷೇತರರು:
2018 ರ ವಿಧಾನಸಭೆ ಚುನಾವಣೆ ಫಲಿತಾಂಶ ಬಳಿಕ ಮೈತ್ರಿ ಸರ್ಕಾರ ರಚನೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷೇತರರಾದ ರಾಣೆಬೆನ್ನೂರು ಕೆಪಿಜೆಪಿ ಶಾಸಕ ಆರ್.ಶಂಕರ್ ಹಾಗೂ ಮುಳಬಾಗಿಲು ಶಾಸಕ ನಾಗೇಶ್ ಅವರು ಬಿಜೆಪಿಗೆ ಹೋಗುವುದನ್ನು ತಪ್ಪಿಸಿ, ಈ ಇಬ್ಬರನ್ನು ಕಾಂಗ್ರೆಸ್ ನತ್ತ ಸೆಳೆದುಕೊಂಡಿದ್ದರು.

ಆರ್.ಶಂಕರ್ ಅವರನ್ನು ಆರಂಭದಲ್ಲಿ ಸಂಪುಟಕ್ಕೆ ಸೇರಿಸಿಕೊಂಡು ಅರಣ್ಯ ಮತ್ತು ಪರಿಸರ ಖಾತೆ ನೀಡಲಾಗಿತ್ತು. ಅದರೆ ಮೈತ್ರಿ ಸರ್ಕಾರ ನೀಡಿದ ಅವಕಾಶವನ್ನು ಅವರು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ತಾವು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿಗೂ ಆದ್ಯತೆ ನೀಡಿರಲಿಲ್ಲ. ಈ ಕಾರಣದಿಂದ ಅವರನ್ನು ವಿಸ್ತರಣೆ ವೇಳೆ ಸಂಪುಟದಿಂದ ಕೈಬಿಡಲಾಗಿತ್ತು. ಇದರಿಂದ ಬೇಸತ್ತ ಶಂಕರ್ ಹಾಗೂ ಮತ್ತೊಂದು ಕಡೆ ನಾಗೇಶ್, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮೈತ್ರಿ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಆರೋಪ ನೀಡಿ ಕಳೆದ ಜನವರಿ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆದಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಳೆದ ಫೆಬ್ರವರಿಯಲ್ಲಿ ಮತ್ತೆ ಅವರಿಬ್ಬರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದರು.

ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢ:
ಈ ಮೊದಲು ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಅವರ ಜೊತೆ ಗುರುತಿಸಿಕೊಂಡಿದ್ದ ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಭೀಮಾನಾಯಕ್ ಸೇರಿದಂತೆ ಕೆಲವರಿಗೆ ಸಂಪುಟ ಪುನಾರಚನೆಯಲ್ಲಿ ಅವಕಾಶ ನೀಡುವ ಮೂಲಕ ಪಕ್ಷದ ಬಗ್ಗೆ ಅವರಿಗಿರುವ ಅಸಮಾಧಾನವನ್ನು ನಿವಾರಿಸಲು ಉದ್ದೇಶಿಸಿದ್ದರು. ಆದರೆ ಸಂಪುಟ ಪುನಾರಚನೆ ಮಾಡಿದ್ದೇ ಆದಲ್ಲಿ ಪಕ್ಷದಲ್ಲಿ ಇನ್ನಷ್ಟು ತೊಂದರೆಯಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಒಬ್ಬರನ್ನು ಸಮಾಧಾನ ಮಾಡಲು ಯತ್ನಿಸಿದರೆ ಮತ್ತೊಬ್ಬರು ತಿರುಗಿಬೀಳುವ ಪರಿಸ್ಥಿತಿ ತಲೆದೋರಬಹುದು. ಹೀಗಾಗಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿ, ಬಳಿಕ ಪರಿಸ್ಥಿತಿಗೆ ತಕ್ಕಂತೆ ಸೂಕ್ತ ನಿರ್ಧಾರ ಕೈಗೊಳ್ಳಲು ಮೈತ್ರಿ ನಾಯಕರು ಕಾರ್ಯತಂತ್ರ ರೂಪಿಸಿದ್ದಾರೆ. ಸಂಪುಟ ವಿಸ್ತರಣೆ ಬಗ್ಗೆ ರಮೇಶ್ ಜಾರಕಿಹೊಳಿಯಾಗಲೀ ಅವರೊಂದಿಗೆ ಗುರುತಿಸಿಕೊಂಡ ಅತೃಪ್ತ ಶಾಸಕರಾಗಲೀ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅವರ ನಡೆ ಮುಂದಿನ ಕಾರ್ಯಾಚರಣೆ ಇನ್ನೂ ನಿಗೂಢವಾಗಿದೆ.

ಇನ್ನು ಸಂಪುಟ ಪುನಾರಚನೆಯನ್ನು ಕೈಬಿಟ್ಟಿದ್ದಕ್ಕೆ ಕೆಲ ದಿನಗಳ ಕಾಂಗ್ರೆಸ್ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಸ್ವಪಕ್ಷದ ಕೆಲ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಹೈಕಮಾಂಡ್ ಮನವೊಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸದ್ಯದ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಅತೃಪ್ತರಿಗೆ ಸೂಕ್ತ ರಾಜಕೀಯ ಅಧಿಕಾರ ನೀಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಿ.ಸಿ.ಪಾಟೀಲ್ ಹಾಗೂ ರಾಮಲಿಂಗಾರೆಡ್ಡಿ ಇವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡುವುದನ್ನು ತಳ್ಳಿಹಾಕುವಂತಿಲ್ಲ.

ಸಂಪುಟ ವಿಸ್ತರಣೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಆರ್.ಶಂಕರ್ ಅವರನ್ನು ಕೆಪಿಸಿಸಿ ಕಚೇರಿಗೆ ಬರಮಾಡಿಕೊಂಡರು. ಸಿದ್ದರಾಮಯ್ಯ ಆಪ್ತ ಬೈರತಿ ಬಸವರಾಜ್ ಅವರೊಂದಿಗೆ ಕೆಪಿಸಿಸಿಗೆ ಆಗಮಿಸಿ ಅಧ್ಯಕ್ಷರ ಜೊತೆ ಕೆಲಕಾಲ ಮಹತ್ವದ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಶಂಕರ್, ಪಕ್ಷದ ಅಧ್ಯಕ್ಷರು ತಮ್ಮನ್ನು ಸೌಜನ್ಯಕ್ಕೆ ಅಹ್ವಾನಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ನಾನಿನ್ನೂ ತೀರ್ಮಾನ ಮಾಡಿಲ್ಲ. ಸಚಿವ ಸ್ಥಾನದ ಬಗ್ಗೆ ನನಗಿನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಹೀಗಾಗಿ ಅದರ ಬಗ್ಗೆ ಸದ್ಯಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಸಂಪುಟ ವಿಸ್ತರಣೆ ಬಗ್ಗೆ ಗೌಪ್ಯತೆ ಕಾಪಾಡಿಕೊಳ್ಳುವಂತೆ ಹೇಳಿದ ಸೂಚನೆಯನ್ನು ಅವರು ಪಾಲಿಸಿದರು.

ಸಚಿವ ಸ್ಥಾನಕ್ಕಾಗಿ ಪಕ್ಷದ ಕಚೇರಿಗೆ ಎಡೆತಾಕಿದ ಶಾಸಕರು:
ಸಂಪುಟ ವಿಸ್ತರಣೆ ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ಶಾಸಕರು ಪಕ್ಷದ ಕಚೇರಿಯತ್ತ ಎಡತಾಕಿದರು. ಲಿಂಗಸುಗೂರು ಶಾಸಕ ಡಿ.ಎಸ್.ಹುಲಗೇರಿ ಹಾಗೂ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕೆಪಿಸಿಸಿ ಕಚೇರಿಗೆ ಆಗಮಿಸಿ ತಮಗೂ ಸಚಿವ ಸ್ಥಾನ ನೀಡುವಂತೆ ಪಕ್ಷದ ಅಧ್ಯಕ್ಷರಲ್ಲಿ ಕೋರಿಕೊಂಡರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp