ಬಿ. ಎಲ್. ಸಂತೋಷ್ ಜೊತೆ ಸುಮಲತಾ ಚರ್ಚೆ, ಕುತೂಹಲ ಕೆರಳಿಸಿದ ಮಂಡ್ಯ ಸಂಸದೆ ನಡೆ

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ....
ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಶನಿವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಭೇಟಿ ನೀಡಿ, ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ಸುಮಲತಾ ಅವರನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಬೆಂಗಳೂರು ನಗರ ಅಧ್ಯಕ್ಷರಾದ ಪಿ.ಎನ್.ಸದಾಶಿವ ಸ್ವಾಗತಿಸಿದರು. ಮೊದಲು ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ, ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಯುವ ಮೋರ್ಚಾ ಮುಖಂಡರಾದ ಬಿ.ವೈ.ವಿಜಯೇಂದ್ರ, ತಮ್ಮೇಶ ಗೌಡ ಹಾಗೂ ಮತ್ತಿತತರು ಉಪಸ್ಥಿತರಿದ್ದರು.
ರಾಷ್ಟ್ರೀಯ ಬಿಜೆಪಿ ಸಹ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರೊಂದಿಗೆ ಇದೇ ವೇಳೆ ಸುಮಲತಾ ಮಾತುಕತೆ ನಡೆಸಿದರು. ಸುಮಲತಾ ಅಂಬರೀಷ್ ಅವರಿಗೆ ರಾಕ್‌ಲೈನ್ ವೆಂಕಟೇಶ್ ಸಾಥ್ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಚುನಾವಣೆಯಲ್ಲಿ ತಮಗೆ ಬೆಂಬಲ ಸೂಚಿಸಿದ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಂದಿದ್ದೆ. ದೆಹಲಿಗೆ ಹೋಗಿದ್ದ ಕಾರಣ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಇದ್ದ ಸಮಯದಲ್ಲಿ ಬಂದು ಭೇಟಿಯಾಗಲು ಆಗಿರಲಿಲ್ಲ. ಇಂದಿನ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು.
ಈಗ ಸಂಸದೆಯಾಗಿರುವ ಕಾರಣಕ್ಕೆ ಕ್ಷೇತ್ರದ ಕೆಲಸ ಕಾರ್ಯಗಳಿಗೆ, ಅಭಿವೃದ್ಧಿ ದೃಷ್ಟಿಯಿಂದ ನಾನು ಕೇಂದ್ರ ಸರ್ಕಾರದ ಸಹಾಯ, ಬೆಂಬಲ ಕೇಳಬೇಕಾಗುತ್ತದೆ‌‌. ಪ್ರಸಕ್ತ ಬಿಜೆಪಿಗೆ 300ಕ್ಕೂ ಹೆಚ್ಚು ಸಂಖ್ಯಾಬಲ ಇರುವ ಕಾರಣ, ಅವರಿಗೆ ನಮ್ಮ ಬಾಹ್ಯ ಬೆಂಬಲದ ಅನಿವಾರ್ಯತೆ ಇಲ್ಲ. ಆದರೂ ನಾನೇನಾದರೂ ಬಿಜೆಪಿಯನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳುವ ಮುಂಚೆ ನನ್ನ ಕ್ಷೇತ್ರದ ಮತದಾರರನ್ನು ಕೇಳಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ಸೇರ್ಪಡೆಯ ಸನ್ನಿವೇಶ ಇಲ್ಲ, ಅಂತಹ ಪರಿಸ್ಥಿತಿ ಬಂದರೆ ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನ ಮತ ಹಾಕಿ ಗೆಲ್ಲಿಸಿದ ನಂತರ ಅವರಿಗೆ ಕೆಲಸ ಮಾಡದಿದ್ದರೆ ಆ ಸ್ಥಾನದಲ್ಲಿದ್ದೂ ಅರ್ಥ ಇಲ್ಲ, ಜನರಿಗೆ ಸಹಾಯ ಮಾಡಲು ಆಗುವುದಿಲ್ಲ ಎಂದರೆ ರಾಜೀನಾಮೆ ನೀಡಿ ಅಂತ ಜನ ಕೇಳುತ್ತಾರೆ. ಸಚಿವ ಡಿ ಸಿ ತಮ್ಮಣ್ಣ ರಾಜೀನಾಮೆ ನೀಡಲಿ ಎಂದು ನಾನು ಒತ್ತಾಯಿಸುವುದಿಲ್ಲ, ಜನರೇ ಕೇಳುತ್ತಾರೆ, ಅಧಿಕಾರ ನೀಡಿದವರ ವಿರುದ್ಧ ದರ್ಪ ತೋರಿಸಬಾರದು, ತಮ್ಮಣ್ಣ ಅವರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಾನು ಇದೇ ಮೊದಲ ಬಾರಿಗೆ ದ್ವೇಷದ ರಾಜಕಾರಣವನ್ನು ನೋಡುತ್ತಿದ್ದೇನೆ. ನಮ್ಮನ್ನು ಬೆಂಬಲಿಸಿದ ಕಾರಣಕ್ಕೆ ಕ್ಷೇತ್ರದ ಜನರ ಕೆಲಸ ಕಾರ್ಯ ಮಾಡಿಕೊಡಲ್ಲ ಎಂದು ಸಚಿವರು, ಶಾಸಕರು ಹೇಳುತ್ತಾರೆ ಎಂದರೆ ಅದು ಅವರನ್ನು ಆಯ್ಕೆ ಮಾಡಿದ ಮತದಾರರಿಗೆ ಮಾಡಿದ ದ್ರೋಹ. ದ್ವೇಷದ ರಾಜಕಾರಣವನ್ನು ಜನ ಎಂದಿಗೂ ಒಪ್ಪುವುದಿಲ್ಲ ಎಂದು ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದರು.
ಚುನಾವಣೆಗೆ ನಿಂತಾಗಿಂದಲೂ ತಮ್ಮನ್ನು ಗುರಿಯಾಗಿಸಲಾಯಿತು, ಈಗಲೂ ಗುರಿಯಾಗಿಸಲಾಗುತ್ತಿದೆ, ನನ್ನನ್ನು ಗುರಿಯಾಗಿಸಿದರೆ ಅದನ್ನು ಸಹಿಸಿಕೊಳ್ಳಬಹುದು ಆದರೆ ಜನರನ್ನು ಈ ರೀತಿ ಗುರಿಯಾಗಿಸುವುದನ್ನು ಸಹಿಸಲು ಸಾಧ್ಯವಿಲ್ಲ, ಜನರನ್ನು ಗುರಿಯಾಗಿಸುವುದು ಸರಿಯಲ್ಲ, ಮಂಡ್ಯದ ಪ್ರತಿಯೊಬ್ಬರಿಗಾಗಿಯೂ ನಾನು ಕೆಲಸ ಮಾಡುತ್ತೇನೆ, ಕೇವಲ‌ ನನಗೆ ಮತ ಹಾಕಿದವರಿಗೆ ಮಾತ್ರ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ನಿನ್ನೆ ನಿಖಿಲ್ ಕುಮಾರಸ್ವಾಮಿ ಜವಾಬ್ದಾರಿಯುತ ಹೇಳಿಕೆ ಕೊಟ್ಟಿದ್ದಾರೆ, ಅದನ್ನು ಅವರ ಪಕ್ಷದವರೂ ಪಾಲಿಸಬೇಕು, ಬರೇ ಹೇಳಿಕೆ ಕೊಟ್ಟರೆ ಸಾಲದು, ಈ ರೀತಿಯ ಸೇಡು, ಟಾರ್ಗೆಟ್ ಮಾಡದಂತೆ ನೋಡಿಕೊಳ್ಳುವುದು ಆ ಪಕ್ಷದವರ ಜವಾಬ್ದಾರಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಮಂಡ್ಯದ ಅಭಿವೃದ್ಧಿಗೆ ಘೋಷಿರುವ ಅನುದಾನ ಬಿಡುಗಡೆ ಮಾಡಬೇಕು, ಇದರ ಬಗ್ಗೆ ನಿನ್ನೆ ನಿಖಿಲ್ ಕುಮಾರಸ್ವಾಮಿ ಸಹ ಪ್ರಸ್ತಾಪಿಸಿದ್ದಾರೆ, ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಘೋಷಿಸಿರುವ ಅನುದಾನದ ವಿಷಯವನ್ನು ಅವರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com