ಮನೆಯಲ್ಲಿ ಅಥವಾ ತಾಜ್ ಹೊಟೇಲಲ್ಲಿ ನಿದ್ದೆ ಬರಲ್ಲ ಎಂದು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ-ಸಿಎಂ ಹೆಚ್ ಡಿ ಕುಮಾರಸ್ವಾಮಿ

ನನ್ನ ಗ್ರಾಮ ವಾಸ್ತವ್ಯದ ಹಿಂದೆ ಯಾವುದೇ ರೀತಿಯ ರಾಜಕೀಯ ಉದ್ದೇಶ, ಪ್ರಚಾರ ಗಿಟ್ಟಿಸಿಕೊಳ್ಳುವ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಬೆಂಗಳೂರು: ನನ್ನ ಗ್ರಾಮ ವಾಸ್ತವ್ಯದ ಹಿಂದೆ ಯಾವುದೇ ರೀತಿಯ ರಾಜಕೀಯ ಉದ್ದೇಶ, ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಅಥವಾ ಕಾಟಾಚಾರಕ್ಕೆ ಮಾಡುವ ಕೆಲಸವಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ನಾನು ಗ್ರಾಮ ವಾಸ್ತವ್ಯ ಮಾಡಲು ಹೊರಟಿರುವುದಕ್ಕೆ ವಿರೋಧ ಪಕ್ಷದ ಬಿಜೆಪಿ ನಾಯಕರು ಸೇರಿದಂತೆ ಹಲವರು ಟೀಕಿಸುತ್ತಿದ್ದಾರೆ. ಮಾಧ್ಯಮಗಳಲ್ಲಿಯೂ ಹಲವು ವರದಿಗಳು ಬರುತ್ತಿವೆ. ಆದರೆ ನನಗೆ ಮನೆಯಲ್ಲಿ ಅಥವಾ ತಾಜ್ ಹೊಟೇಲ್ ನಲ್ಲಿ ಮಲಗಿದರೆ ನಿದ್ದೆ ಬರುವುದಿಲ್ಲ ಎಂದು ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ಹಳ್ಳಿಯ ಮೂಲಭೂತ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಪ್ರಾಮಾಣಿಕವಾಗಿ ಪರಿಹಾರ ಒದಗಿಸಲು ಗ್ರಾಮ ವಾಸ್ತವ್ಯ ಮಾಡಲು ಹೊರಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇದೇ ತಿಂಗಳ 20ರ ನಂತರ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಗ್ರಾಮ ವಾಸ್ತವ್ಯ ಆರಂಭಿಸುವ ಮೂಲಕ ಶಾಲೆಗಳ ಸಮಸ್ಯೆಗಳನ್ನು ಕೂಡ ಅರಿತು ಅಲ್ಲಿನ ಅಧಿಕಾರಿಗಳ ಜೊತೆ ಮಾತನಾಡಿ ಅವುಗಳ ಪರಿಹಾರಕ್ಕೆ ಮುಂದಾಗುತ್ತೇನೆ, ಶಾಲೆಗಳಲ್ಲಿ ಹೋಗಿ ಸ್ವಲ್ಪ ಹೊತ್ತು ಇದ್ದು ಬರುವುದಲ್ಲ, ಬೆಳಗ್ಗೆಯಿಂದ ಸಾಯಂಕಾಲದವರೆಗೆ ಇದ್ದು ಸುತ್ತಮುತ್ತಲ ಹಳ್ಳಿಗಳ ಸ್ಥಿತಿಗತಿ, ಸಮಸ್ಯೆಗಳನ್ನು ಅರಿತು ಜಿಲ್ಲಾಧಿಕಾರಿಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ. ನನ್ನ ಗ್ರಾಮ ವಾಸ್ತವ್ಯದಿಂದ ಪರಿಣಾಮಕಾರಿ ಬದಲಾವಣೆ ಕಾಣುವುದು ಖಂಡಿತ ಎಂದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಲು ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಹ ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com