ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು? ಕಾರ್ನಾಡ್ ನಿಧನ ಹಿನ್ನಲೆ ಸಂಪುಟ ವಿಸ್ತರಣೆ ಮುಂದಕ್ಕೆ!

ಜ್ಞಾನಪೀಠ ಸಾಹಿತಿ, ಹಿರಿಯ ರಂಗಕರ್ಮಿ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ...

Published: 10th June 2019 12:00 PM  |   Last Updated: 10th June 2019 01:33 AM   |  A+A-


Girish Karnad

ಗಿರೀಶ್ ಕಾರ್ನಾಡ್

Posted By : SD SD
Source : UNI
ಬೆಂಗಳೂರು: ಜ್ಞಾನಪೀಠ ಸಾಹಿತಿ, ಹಿರಿಯ ರಂಗಕರ್ಮಿ ಗಿರೀಶ್ ಕಾರ್ನಾಡ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದ್ದು, ಇದರಿಂದ ಜೂನೇ 12ರಂದು ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಸಹ ಮುಂದಕ್ಕೆ ಹೋಗಿದೆ

ಸಂಪುಟ ವಿಸ್ತರಣೆ ಬಗ್ಗೆ ಮಿತ್ರ ಪಕ್ಷಗಳಲ್ಲಿ ಗೊಂದಲ ಬಗೆಹರಿಯದೆ ನಿತ್ಯವೂ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದ ಸಮಯದಲ್ಲಿ ಈ ಅನಿರೀಕ್ಷಿತ ಬೆಳವಣಿಗೆ, ಮಿತ್ರ ಪಕ್ಷಗಳ ನಾಯಕರಿಗೆ, "ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ" ಆಗಿದೆ.

ಮೊದಲೇ ಇಷ್ಟವಿಲ್ಲದಿದ್ದರೂ ಎಲ್ಲಿ ಸರ್ಕಾರ ಬಿದ್ದು ಹೋಗಲಿದೆಯೋ ಎಂಬ ಅತಂಕದಲ್ಲಿ ಸಂಪುಟ ವಿಸ್ತರಣೆಗೆ ಒಲ್ಲದ ಮನಸ್ಸಿನಿಂದಲೇ ಎರಡೂ ಪಕ್ಷಗಳು ಮುಂದಾಗಿದ್ದವು. ಈಗ ಮೂರು ದಿನಗಳ ಶೋಕಾಚರಣೆ ಕಾರಣ ಮತ್ತೆ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. 

ಇದು ಕೆಲವರಿಗೆ ಬಹಳ ನಿರಾಸೆ ಉಂಟು ಮಾಡಿದ್ದರೆ ಮತ್ತೆ ಕೆಲವರಿಗೆ ಒಳ ಒಳಗೆ ಖುಷಿ ಕೊಟ್ಟಿದೆ. ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಶಾಸಕರು ಮಂತ್ರಿ ಪದವಿ ಮೇಲೆ ಕಣ್ಣಿಟ್ಟಿದ್ದು ಸಂಪುಟ ವಿಸ್ತರಣೆ ಮಾಡಿದರೆ ಎಲ್ಲಿ ಸಮಸ್ಯೆ , ಭಿನ್ನಮತ ಮತ್ತೆ ಉಲ್ಬಣವಾಗಿ ಪಕ್ಷದಲ್ಲಿ ಅಸಮಾಧಾನದ ಬಿರುಗಾಳಿ ಹೆಚ್ಚಾಗಬಹುದೆನೋ ಎಂಬ ಆತಂಕ ಕಾಡುತ್ತಿದೆ. 

ಇದರ ಶಮನಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ತರಾತುರಿಯಲ್ಲಿ ನಗರಕ್ಕೆ ಬರಲಿದ್ದಾರೆ ಎಂದು ಹೇಳಲಾಗಿತ್ತು, ಅವರು ಸೋಮವಾರ ಇಲ್ಲವೇ ಮಂಗಳವಾರ ಬೆಂಗಳೂರಿಗೆ ಬರುವ ಕಾರ್ಯಕ್ರಮವಿತ್ತು. ಆದರೆ ಕಾರ್ನಾಡ್ ನಿಧನದ ಕಾರಣ, ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಇರುವುದರಿಂದ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗಿದೆ. ಹೀಗಾಗಿ ವೇಣುಗೋಪಾಲ್ ಅವರ ಭೇಟಿ ಸಹ ಮುಂದಕ್ಕೆ ಹೋಗಲಿದೆ ಎಂದು ಹೇಳಲಾಗುತ್ತಿದೆ 

ಜೆಡಿಎಸ್ ನಲ್ಲಿ ಉದ್ಯಮಿ ಫಾರೂಕ್ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವ ತೀರ್ಮಾನದ ಬಗ್ಗೆ ಪಕ್ಷದ ಮಟ್ಟದಲ್ಲೆ ಸಾಕಷ್ಟು ಅಸಮಾಧಾನಗಳಿವೆ, ಲೋಕಸಭಾ ಚುನಾವಣೆಯಲ್ಲಿ ಸೋತ ಮೇಲೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿದೆ. ಈಗ ಅವರಿಗೆ ಸಚಿವ ಸ್ಥಾನ ನೀಡಲು ಮುಂದಾಗಿರುವುದು ಪಕ್ಷದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಒಟ್ಟಿನಲ್ಲಿ ಈ ವಿಸ್ತರಣೆ ಎರಡೂ ಪಕ್ಷಗಳ ಹಿರಿಯ ನಾಯಕರಿಗೆ ಬೇಕಾಗಿರಲಿಲ್ಲ. ಬಿಜೆಪಿ ನಾಯಕರ ಕಾಟದಿಂದ ತಪ್ಪಿಸಿಕೊಳ್ಳಲು ಹಾಗೂ ಪ್ರಸಕ್ತ ಸಮಸ್ಯೆಯಿಂದ ಪಾರಾಗಲು ಕಾಟಾಚಾರಕ್ಕೆ ಸಂಪುಟ ವಿಸ್ತರಣೆ ಮಾಡಲು ಹೊರಟಿದ್ದ ನಾಯಕರಿಗೆ ಈ ಬೆಳವಣಿಗೆ ಬಯಸದೇ ಬಂದ ಭಾಗ್ಯ ಎಂದರೂ ತಪ್ಪಲ್ಲ.!

ಈ ನಡುವೆ ಜೆಡಿಎಸ್ ಪರಮೋಚ್ಚ ನಾಯಕ ಎಚ್ ಡಿ ದೇವೇಗೌಡ ಸೋಮವಾರ ನವದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಬಗ್ಗೆ ಚರ್ಚೆ ನಡೆಸಲಿರುವುದು ಕೂಡ ಹಲವು ಕುತೂಹಲಗಳಿಗೆ ದಾರಿಮಾಡಿಕೊಟ್ಟಿದೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp