ಮನ್ಸೂರ್ ಖಾನ್ ಸಚಿವರ ಹೆಸರು ಬಹಿರಂಗಗೊಳಿಸಿದರೆ ಸರ್ಕಾರ ಪತನ: ಕೋಟಾ ಶ್ರೀನಿವಾಸ ಪೂಜಾರಿ

ಐಎಂಎ ಹಣಕಾಸು ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್, ಒಂದು ವೇಳೆ ಪ್ರಕರಣದಲ್ಲಿ ಕೇಳಿಬಂದಿರುವ ರಾಜ್ಯ ಸಚಿವ ಸಂಪುಟದ ಸಚಿವರ ಹೆಸರನ್ನು ....
ಕೋಟಾ ಶ್ರೀನಿವಾಸ ಪೂಜಾರಿ
ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು: ಐಎಂಎ ಹಣಕಾಸು ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್, ಒಂದು ವೇಳೆ ಪ್ರಕರಣದಲ್ಲಿ ಕೇಳಿಬಂದಿರುವ ರಾಜ್ಯ ಸಚಿವ ಸಂಪುಟದ ಸಚಿವರ ಹೆಸರನ್ನು ಬಹಿರಂಗಗೊಳಿಸಿದ 24 ತಾಸುಗಳಲ್ಲಿಯೇ ಮೈತ್ರಿ ಸರ್ಕಾರ ಪತನಗೊಳ್ಳಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭವಿಷ್ಯ ನುಡಿದಿದ್ದಾರೆ. 
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಐಎಂಎ ವಂಚನೆ ಪ್ರಕರಣ ಸರ್ಕಾರದ ಮೂಗಿನಡಿಯಲ್ಲಿಯೇ ನಡೆದಿದೆ. ಹೀಗಾಗಿ ಆತಂಕಗೊಂಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಕರಣ ಸಂಬಂಧ ಯಾವುದೇ ನಿರ್ದಿಷ್ಟ ಕ್ರಮಕೈಗೊಳ್ಳುತ್ತಿಲ್ಲ. ಸರ್ಕಾರವನ್ನು ಉಳಿಸಿಕೊಳ್ಳುವ ಭಯದಲ್ಲಿರುವ ಕುಮಾರಸ್ವಾಮಿ, ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ವಹಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡುವ ಬದಲು ಕುಮಾರಸ್ವಾಮಿ, ಆರೋಪಿಯ ಬಂಧನಕ್ಕೆ ಕ್ರಮಕೈಗೊಳ್ಳಬೇಕು. ಆತನ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ ವಕ್ಫ್ ಆಸ್ತಿ ದುರುಪಯೋಗಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸದೆ ಅಲ್ಪಸಂಖ್ಯಾತರಿಗೆ ಅನ್ಯಾಯ‌ಮಾಡಿತ್ತು. ಈಗ ಐಎಂಎ ವಂಚನೆ ಪ್ರಕರಣದಲ್ಲಿ ಸರಿಯಾಗಿ ಕ್ರಮಕೈಗೊಳ್ಳದೇ ಅಲ್ಪಸಂಖ್ಯಾತರ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಕೋಟಾ ಆರೋಪಿಸಿದರು.
ಜಿಂದಾಲ್ ಸಂಸ್ಥೆಗೆ ಭೂಮಿ ಪರಬಾರೆ ಮಾಡುವ ಸರ್ಕಾರದ ಕ್ರಮವನ್ನು ಬಿಜೆಪಿ ವಿರೋಧಿಸಿದ್ದು, ಪಕ್ಷ ನೀಡಿದ ಎಚ್ಚರಿಕೆಯ ನಂತರ ಸರ್ಕಾರ ಎಚ್ಚೆತ್ತುಕೊಂಡು ಸಚಿವ ಸಂಪುಟ ನಿರ್ಧಾರ ಮರುಪರಿಶೀಲಿಸಿ ಮತ್ತೊಂದು ಸಮಿತಿ ರಚನೆ ಮಾಡುವುದಾಗಿ ಹೇಳಿದೆ. ಆದರೆ ಸರ್ಕಾರ ತನ್ನ ಸಚಿವ ಸಂಪುಟದ ನಿರ್ಧಾರದಿಂದ ಹಿಂದೆ ಸರಿದು ಭೂಮಿ ಪರಬಾರೆ ಆದೇಶ ಹಿಂಪಡೆಯುವವರೆಗೂ ಬಿಜೆಪಿ ತನ್ನ ಹೋರಾಟ ನಿಲ್ಲಿಸುವುದಿಲ್ಲ. ಜಿಂದಾಲ್ ಸಂಸ್ಥೆ ಸಂಬಂಧ ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಸಮಿತಿ ಕೊಟ್ಟ ವರದಿ ಏನಾಯಿತು? ಎಂದು ಪ್ರಶ್ನಿಸಿದರು. 
ಚಾಮರಾಜನಗರದ ದಲಿತರನ್ನು ನಗ್ನಗೊಳಿಸಿ ಹಲ್ಲೆ ಮಾಡಿರುವ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ಸಂತ್ರಸ್ತರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಒತ್ತಾಯಿಸಿದರು. 
ಕಳೆದ ಬಾರಿ ಪಶ್ಚಿಮಘಟ್ಟದಲ್ಲಿ ನಡೆದ ಮೇಘಸ್ಫೋಟ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕರು , ಸಂಘ ಸಂಸ್ಥೆಗಳು‌ ನೀಡಿದ ದೇಣಿಗೆಯನ್ನೇ ಸರ್ಕಾರ ಸಮರ್ಪಕವಾಗಿ ಬಳಕೆ ಮಾಡಿಲ್ಲ. ಕೊಡಗು ಸಂತ್ರಸ್ಥರಿಗಾಗಿ ಸಾರ್ವಜನಿಕರು ಕಳುಹಿಸಿದ್ದ ಬಟ್ಟೆ, ದಿನಬಳಕೆ ವಸ್ತುಗಳೆಲ್ಲ ಕೊಡಗಿನ ಕಲ್ಯಾಣ ಮಂಟಪಗಳಲ್ಲಿ ಹಾಗೆಯೇ ಕೊಳೆಯುತ್ತಾ ಬಿದ್ದಿವೆ. ಪರಿಹಾರ, ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದ ಸರ್ಕಾರ, ಎಲ್ಲದಕ್ಕೂ ಕೇಂದ್ರ ಸರ್ಕಾರವೇ ಹೊಣೆ ಎಂದು ಬೊಟ್ಟು ಮಾಡುವುದು ಎಷ್ಟು ಸರಿ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com