ನಾಳೆ ಸಂಪುಟ ವಿಸ್ತರಣೆ: ಪಕ್ಷೇತರರೊಡನೆ ಎಚ್. ವಿಶ್ವನಾಥ್‌ಗೆ ಸಚಿವ ಸ್ಥಾನ?

ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶುಕ್ರವಾರ ವಿಸ್ತರಣೆಯಾಗಲಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್ ಹಿರಿಯ ನಾಯಕ, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ...
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶುಕ್ರವಾರ ವಿಸ್ತರಣೆಯಾಗಲಿದ್ದು, ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್ ಹಿರಿಯ ನಾಯಕ, ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್‌ ಮಂತ್ರಿಮಂಡಲಕ್ಕೆ ಸೇರ್ಪಡೆಯಾಗುವ ಲಕ್ಷಣಗಳು ಕಾಣತೊಡಗಿವೆ.
ಶುಕ್ರವಾರ ಮಧ್ಯಾಹ್ನ 11.30 ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವುದು ನಿಶ್ಚಿತವಾಗಿದೆಯಾದರೂ ಕೊನೆಯ ಕ್ಷಣದಲ್ಲಿ ಜೆಡಿಎಸ್‌ ವತಿಯಿಂದ ವಿಶ್ವನಾಥ್‌ ಅವರು ಮಂತ್ರಿಯಾಗುವ ಸಾಧ್ಯತೆಗಳಿವೆ.
ಜೆಡಿಎಸ್‌ ಕೋಟಾದಲ್ಲಿ ಎರಡು ಮಂತ್ರಿ ಸ್ಥಾನಗಳು ಖಾಲಿ ಉಳಿದಿದ್ದು, ಈ ಪೈಕಿ ಒಂದನ್ನು ಕಾಂಗ್ರೆಸ್ ಪಕ್ಷೇತರ ಶಾಸಕರಿಗೆ ಬಿಟ್ಟು ಕೊಡಲು ನಿರ್ಧರಿಸಿದೆ. ಕಾಂಗ್ರೆಸ್‌ ಕೋಟಾದಲ್ಲಿ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ - ಜೆಡಿಎಸ್‌ ಕೋಟಾದ ಎರಡು ಸ್ಥಾನಗಳ ಪೈಕಿ ಒಂದನ್ನು ಕೇಳಿ ಪಡೆದಿದೆ. ಜೆಡಿಎಸ್‌ ವತಿಯಿಂದ ಖಾಲಿ ಉಳಿದಿರುವ ಎರಡು ಮಂತ್ರಿ ಸ್ಥಾನಗಳನ್ನು ತನಗೇ ಬಿಟ್ಟುಕೊಡುವಂತೆ ಕಾಂಗ್ರೆಸ್ ಕೇಳಿತಾದರೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇದಕ್ಕೊಪ್ಪಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜೆಡಿಎಸ್‌ ಬಿಟ್ಟು ಕೊಟ್ಟ ಒಂದು ಸ್ಥಾನವನ್ನು ಭರ್ತಿ ಮಾಡಲು ನಿರ್ಧರಿಸಿರುವ ಕಾಂಗ್ರೆಸ್‌ ಪಕ್ಷ, ತನ್ನ ಕೋಟಾವನ್ನು ಭರ್ತಿ ಮಾಡದೆ ಹಾಗೇ ಖಾಲಿ ಇರಿಸಿಕೊಳ್ಳಲು ನಿರ್ಧರಿಸಿದೆ.
ಆದರೆ ಈ ಒಂದು ಸ್ಥಾನವನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಬೇಕು ಎಂಬ ಒತ್ತಡ ಹೆಚ್ಚಿದೆಯಾದರೂ ಈ ಸ್ಥಾನವನ್ನು ಭರ್ತಿ ಮಾಡಿದರೆ ಬಿ.ಸಿ ಪಾಟೀಲ್ , ಎಚ್.ಕೆ.ಪಾಟೀಲ್‌ ಸೇರಿದಂತೆ ಉಳಿದ ಹಿರಿಯ ಕಾಂಗ್ರೆಸ್ ನಾಯಕರು ಬಂಡಾಯ ಏಳಬಹುದು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.
ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಲಿರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪಕ್ಷೇತರ ಶಾಸಕರಿಬ್ಬರು ಮಂತ್ರಿಗಳಾಗುವ ಸಾಧ್ಯತೆ ನಿಚ್ಚಳವಾಗಿದೆ. ಆದರೆ ಆರ್ ಶಂಕರ್ ಕೆಪಿಜೆಪಿ ಪಕ್ಷವನ್ನುಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸುವ ಮಾತನ್ನು ಇನ್ನೂ ಪೂರ್ಣಗೊಳಿಸಿಲ್ಲ. ಹೀಗಾಗಿ ತಡಮಾಡಿದರೆ ನಾಳೆ ನಡೆಯುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಪಡೆಯಲು ಕಷ್ಟವಾಗಬಹುದು ಎಂಬ ಮಾತು ಕೇಳಿ ಬರುತ್ತಿವೆ.
ಕುತೂಹಲದ ಬೆಳವಣಿಗೆ ಎಂದರೆ ಇಂದು ಜೆಡಿಎಸ್‌ ತನ್ನ ಲೆಕ್ಕಾಚಾರವನ್ನು ಪರಿವರ್ತಿಸಿಕೊಂಡಿರುವುದು. ಅದರ ಪ್ರಕಾರ, ಅದು ಸಚಿವ ಸಂಪುಟಕ್ಕೆ ಹಿರಿಯ ನಾಯಕ, ಹುಣಸೂರು ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್‌ ಅವರನ್ನು ಸೇರ್ಪಡೆ ಮಾಡಿಕೊಳ್ಳಲು ಯೋಚಿಸಿದೆ.
ಈ ಸಂಬಂಧ ಖುದ್ದು ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜತೆ ಚರ್ಚೆ ನಡೆಸಿದ್ದು, ಈಗಾಗಲೇ ಸಚಿವ ಸಂಪುಟದಲ್ಲಿರುವ ಕುರುಬ ಸಮುದಾಯದ ಬಂಡೆಪ್ಪ ಖಾಶೆಂಪೂರ್‌ ಅವರನ್ನು ಕೈ ಬಿಟ್ಟು ಎಚ್.ವಿಶ್ವನಾಥ್‌ ಅವರನ್ನು ಮಂತ್ರಿ ಮಾಡುವುದು ಒಳ್ಳೆಯದು ಎಂದಿದ್ದಾರೆ.
ಉನ್ನತ ಮೂಲಗಳು ಈ ವಿಷಯವನ್ನು ತಿಳಿಸಿದ್ದು, ಹೀಗೆ ಬಂಡೆಪ್ಪ ಖಾಶೆಂಪೂರ್‌ ಅವರನ್ನು ಮಂತ್ರಿ ಮಂಡಲದಿಂದ ಕೈ ಬಿಟ್ಟು ವಿಶ್ವನಾಥ್‌ ಅವರನ್ನು ಮಂತ್ರಿ ಮಾಡುವುದು. ಹಾಗೆಯೇ ವಿಶ್ವನಾಥ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನವನ್ನು ಬಂಡೆಪ್ಪ ಖಾಶೆಂಪೂರ್‌ ಅವರಿಗೆ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಅಲ್ಲಿಗೆ ಮಂತ್ರಿಮಂಡಲದಿಂದ ಕೈ ಬಿಟ್ಟರೂ ಬಂಡೆಪ್ಪ ಕಾಶಂಪೂರ್‌ ಅವರಿಗೆ ನಿರಾಸೆಯಾಗುವುದಿಲ್ಲ. ಹಾಗೆಯೇ ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ದೊರಕಿಸಿಕೊಟ್ಟರೆ ಅವರಿಗಿರುವ ಬೇಸರವೂ ನಿವಾರಣೆಯಾಗುತ್ತದೆ ಎಂಬುದು ದೇವೇಗೌಡರ ಯೋಚನೆ.
ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಕುತೂಹಲ ಕೆರಳಿಸಿದ್ದು ವಿಶ್ವನಾಥ್‌ ಮಂತ್ರಿಯಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ಇದೇ ವೇಳೆ ಅಲ್ಪಸಂಖ್ಯಾತ ಕೋಟಾದಡಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಸಚಿವರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ದಿಢೀರ್ ಬದಲಾವಣೆಯಲ್ಲಿ ವಿಶ್ವನಾಥ್ ಹೆಸರು ಕೇಳಿ ಬರುತ್ತಿದ್ದು ಬಿ.ಎಂ.ಫಾರೂಕ್ ಸಚಿವರಾಗುವುದು ಸಾಧ್ಯತೆ ಕ್ಷೀಣಿಸಿದೆ ಎನ್ನಲಾಗಿದೆ.
ಸಚಿವ ಸಂಪುಟಕ್ಕೆ ಎಚ್ ವಿಶ್ವನಾಥ್ ಸೇರ್ಪಡೆ ಮೂಲಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ದೂರ ಸರಿಯುವ ಯತ್ನ ನಡೆಸಿದ ವಿಶ್ವನಾಥ್ ಸಚಿವ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಸಡ್ಡು ಹೊಡೆಯುವ ಲೆಕ್ಕಾಚಾರ ಮಾಜಿ ಪ್ರಧಾನಿ ದೇವೇಗೌಡರದ್ದು ಎನ್ನಲಾಗಿದೆ.
ಸಮನ್ವಯ ಸಮಿತಿ ಸದಸ್ಯರನ್ನಾಗಿ ವಿಶ್ವನಾಥ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಲೆಕ್ಕಾಚಾರಕ್ಕೆ ಪ್ರತಿತಂತ್ರ ರೂಪಿಸುವ ಮೂಲಕ ಮೈತ್ರಿ ಸರ್ಕಾರದ ಮೇಲೆ ಮತ್ತಷ್ಟು ಹಿಡಿತ ಸಾಧಿಸುವ ಕೆಲಸಕ್ಕೆ ದೇವೇಗೌಡರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com