ನಮ್ಮ ರಕ್ಷಣೆ ಕಾಂಗ್ರೆಸ್ ನದ್ದು, ಸರ್ಕಾರದ ರಕ್ಷಣೆ ನಮ್ಮದು- ಆರ್.ಶಂಕರ್

ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುವಂತೆ ಕಾಂಗ್ರೆಸ್ ನಾಯಕರು ಕೋರಿದ್ದು, ನಮ್ಮ ರಕ್ಷಣೆ ಕಾಂಗ್ರೆಸ್ ಮಾಡಬೇಕು. ಸರ್ಕಾರದ ರಕ್ಷಣೆ ನಾವು ಮಾಡುವ ಒಪ್ಪಂದವಾಗಿದೆ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ.

Published: 14th June 2019 12:00 PM  |   Last Updated: 14th June 2019 07:29 AM   |  A+A-


R.Shankar

ಆರ್. ಶಂಕರ್

Posted By : ABN ABN
Source : UNI
ಬೆಂಗಳೂರು: ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುವಂತೆ ಕಾಂಗ್ರೆಸ್ ನಾಯಕರು ಕೋರಿದ್ದು, ನಮ್ಮ ರಕ್ಷಣೆ ಕಾಂಗ್ರೆಸ್ ಮಾಡಬೇಕು. ಸರ್ಕಾರದ ರಕ್ಷಣೆ ನಾವು ಮಾಡುವ ಒಪ್ಪಂದವಾಗಿದೆ ಎಂದು ಸಚಿವ ಆರ್.ಶಂಕರ್ ಹೇಳಿದ್ದಾರೆ. 

ಎರಡನೇ ಬಾರಿಗೆ ಸಚಿವ ಸಂಪುಟ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷೇತರರು ಎಲ್ಲಿ ಮತ್ತೆ ರಾಜಕೀಯ ಆಟ ಆಡುತ್ತಾರೆ ಎಂಬ ಭಯ ಕಾಂಗ್ರೆಸ್ ಗೆ ಇದ್ದಂತಿದೆ. ಹೀಗಾಗಿಯೇ ''ಹಾಲಿಗೆ ನೀರು ಸೇರಿದರೂ ನೀರಿಗೆ ಹಾಲು ಸೇರಿದರೂ ಹಾಲು ಹಾಲೇ'' ಹಾಗೆಯೇ ಕಾಂಗ್ರೆಸ್ ಕೆಪಿಜೆಪಿ ಜೊತೆ ಸೇರಿದರೂ, ಕೆಪಿಜೆಪಿ ಕಾಂಗ್ರೆಸ್ ಜೊತೆ ವಿಲೀನಗೊಂಡರೂ ಹಾಲೇ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಕಾಂಗ್ರೆಸ್ ಜೊತೆಗಿನ ವಿಲೀನದ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಮೈತ್ರಿ ಸರ್ಕಾರವನ್ನು ಉಳಿಸುವುದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಛಲವಾಗಿದೆ. ಸರ್ಕಾರವನ್ನು ಉರುಳಿಸುವ ಸಾಸಿವೆ ಕಾಳಿನಷ್ಟು ಪ್ರಯತ್ನವನ್ನೂ ಅವರು ಮಾಡಲಿಲ್ಲ. ಎರಡನೇ ಬಾರಿಗೆ ನಾನು ಸಂಪುಟ ಸೇರುತ್ತಿದ್ದೇನೆ. ಇದಕ್ಕಾಗಿ ಸಿದ್ದರಾಮಯ್ಯ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು.

ಮೈತ್ರಿ ಸರ್ಕಾರದ ಉಳಿವಿಗೆ ಇರುವಂತಹ ಅಡೆತಡೆಗಳನ್ನು ಮೈತ್ರಿ ನಾಯಕರು ಸರಿಪಡಿಸಿಕೊಂಡಿದ್ದಾರೆ. ಅನಿವಾರ್ಯವಾಗಿ ಪಕ್ಷೇತರರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ವ್ಯವಸ್ಥೆಯನ್ನು ಸರಿಪಡಿಸಲು ನಾವು ಮಂತ್ರಿಗಳಾಗಿದ್ದೇವೆ ಎಂದರು.

ಯಾವುದೇ ಖಾತೆ ಕೊಟ್ಟರೂ ಅದನ್ನು ನಿಭಾಯಿಸುವ ಸಾಮರ್ಥ್ಯವಿದೆ. ಇಂತಹದ್ದೇ ಖಾತೆ ಎನ್ನುವುದು ಮುಖ್ಯವಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಹಕಾರ ಮುಖ್ಯ ಎಂದು ಆರ್.ಶಂಕರ್ ಸ್ಪಷ್ಟಪಡಿಸಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp