ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಯ ಅಹೋರಾತ್ರಿ ಧರಣಿ ಆರಂಭ

ಜಿಂದಾಲ್ ಗೆ ಕಬ್ಬಿಣದ ಅದಿರಿರುವ ಸಾವಿರಾರು ಎಕರೆ ಭೂಮಿ ಮಾರಾಟಕ್ಕೆ ಮುಂದಾಗಿರುವ ಸರ್ಕಾರ ಕಂಪನಿಯಿಂದ ಕಿಕ್‌ ಬ್ಯಾಕ್ ಪಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಯ ಅಹೋರಾತ್ರಿ ಧರಣಿ ಆರಂಭ
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಯ ಅಹೋರಾತ್ರಿ ಧರಣಿ ಆರಂಭ
ಬೆಂಗಳೂರು: ಜಿಂದಾಲ್ ಗೆ ಕಬ್ಬಿಣದ ಅದಿರಿರುವ ಸಾವಿರಾರು ಎಕರೆ ಭೂಮಿ ಮಾರಾಟಕ್ಕೆ ಮುಂದಾಗಿರುವ ಸರ್ಕಾರ ಕಂಪನಿಯಿಂದ ಕಿಕ್‌ ಬ್ಯಾಕ್ ಪಡೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ
ಜಿಂದಾಲ್ ಗೆ ಭೂ ಮಾರಾಟ ಮಾಡುವುದರ ವಿರುದ್ಧ ಹಾಗೂ ಬರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಇಂದಿನಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಗೆ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಹರಿಹಾಯ್ದರು.
ರಾಜ್ಯದ 3 ಜಿಲ್ಲೆಗಳ 14 ತಾಲೂಕುಗಳಲ್ಲಿ ಬರ ಪ್ರವಾಸ ಕೈಗೊಂಡಿದ್ದೇವೆ. ಸಾಲಮನ್ನಾದ ಲಾಭ ರೈತರಿಗೆ ಸರಿಯಾಗಿ ಸಿಕ್ಕಿಲ್ಲ. ಈಗ 18,000 ಕೋಟಿ ಒಂದೇ ಹಂತದಲ್ಲಿ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದಾರೆ. ಚುನಾವಣೆ ವೇಳೆ ಇದನ್ನು ಹೇಳಿದ್ದರೆ 35 ಅಲ್ಲ 20 ಸ್ಥಾನಗಳನ್ನು ಜೆಡಿಎಸ್ ಗಳಿಸುತ್ತಿರಲಿಲ್ಲ. ಕೂಡಲೇ ಸರ್ವ ಪಕ್ಷ ಸಭೆ ಕರೆದು ಸಾಲ ಮನ್ನಾ ಯೋಜನೆ ಎಲ್ಲಿಗೆ ಬಂದಿದೆ ಎಂಬುದನ್ನು ವಿವರಿಸಬೇಕು ಎಂದು ಆಗ್ರಹಿಸಿದರು.
ಜಿಂದಾಲ್ ಗೆ ನೀಡಿರುವ ಜಮೀನು ಅದಿರು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಆದರೆ ಈಗಾಗಲೇ 5000 ಎಕರೆ ಜಮೀನು ನೀಡಲಾಗಿದೆ ಮತ್ತೆ 3666 ಎಕರೆ ಜಮೀನು ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಜಿಂದಾಲ್‌ಗೆ ಭೂಮಿ ನೀಡುವ ಮೂಲಕ ಎಷ್ಟು ಕಿಕ್ ಬ್ಯಾಕ್ ಪಡೆದಿದ್ದೀರಿ ? ಎಂದು ಪ್ರಶ್ನಿಸಿದ ಅವರು, ತಾಜ್ ಹೊಟೇಲಿನಲ್ಲಿ ಕುಮಾರಸ್ವಾಮಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿಗೆ ಜನಸಾಮಾನ್ಯರಿಗೆ ಹೋಗಲು ಅವಕಾಶವಿಲ್ಲ. ಹೋಟೆಲ್‌ಗೆ ಕಮಿಷನ್ ಕೊಡುವವರು ಅವರನ್ನು ಭೇಟಿಯಾಗಲು ಅವಕಾಶವಿದೆ. ಕುಮಾರಸ್ವಾಮಿ ಜನರಿಗೆ ಸಿಗುವುದಿಲ್ಲ. ಈಗ ಮನೆ ಮತ್ತು ತಾಜ್ ಹೊಟೇಲಿನಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಕಾಮಗಾರಿಯಲ್ಲಿ ಕಮಿಷನ್ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಹೋರಾಟಕ್ಕೆ ಇಳಿಯದಿದ್ದರೆ ಜಿಂದಾಲ್ ಭೂಮಿಯನ್ನು ವಾಪಸ್ ಪಡೆಯುವ ಮನಸ್ಸು ಮಾಡುತ್ತಿರಲಿಲ್ಲ. ವಿರೋಧ ಪಕ್ಷವಾಗಿ ಹೋರಾಟ ನಡೆಸಿ ಸರ್ಕಾರ ಬಿದ್ದು ಹೋಗುವ ತನಕ ಹೋರಾಟ ಮುಂದುವರಿಯಲಿದೆ ಎಂದರು.
ಬಿಜೆಪಿಯ 25 ಸಂಸತ್ ಸದಸ್ಯರನ್ನು ಜನರು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಜನರ ತೀರ್ಪಿಗೆ ವಿರುದ್ಧ ವಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ನಡೆಸುತ್ತಿದೆ. ನಾವು ಬರ ಪ್ರವಾಸ ಮಾಡದಿದ್ದರೆ ಕುಮಾರಸ್ವಾಮಿ ಸಾಲಮನ್ನಾದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ. ಒಂದು ವರ್ಷ ಆದರೂ ಕುಮಾರಸ್ವಾಮಿ ಐದಾರು ಸಾವಿರ ಕೋಟಿ ಸಾಲಮನ್ನಾ ಮಾಡಿಲ್ಲ. ರೈತರ, ಜನತೆಯ ಸಂಕಷ್ಟ ಹೆಚ್ಚಾಗುತ್ತಿದೆ. ಈಗ ಕುಮಾರಸ್ವಾಮಿ ಅವರು 45 ಸಾವಿರ ಕೋಟಿ ಅಲ್ಲ, ನಮ್ಮ ಲೆಕ್ಕಾಚಾರ ಸರಿ ಇರಲಿಲ್ಲ, 15-16 ಸಾವಿರ ಕೋಟಿ ರೂ ಅಷ್ಟೇ ರೈತರ ಸಾಲ ಇರುವುದು ಎಂದು ಹೇಳುತ್ತಿದ್ದಾರೆ. ಹೀಗಿದ್ದಾಗ ಅಂದು 45 ಸಾವಿರ ಕೋಟಿ ರೂಪಾಯಿ ಸಾಲ ಎಂದು ಏಕೆ ಹೇಳಿದ್ದು ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ತುಘಲಕ್ ದರ್ಬಾರ್, ಲೂಟಿಯ ಬಗ್ಗೆ ನಮ್ಮ ಸಂಸದರು ಲೋಕಸಭೆಯಲ್ಲೂ ಪ್ರಸ್ತಾಪಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಹೋರಾಟ ರೂಪಿಸುತ್ತೇವೆ. ನಮ್ಮ ಸಂಸದರು ದೆಹಲಿಗೆ ಹೋಗಬೇಕಾಗಿರುವ ಕಾರಣ ಭಾನುವಾರದ ಸಿಎಂ ಮನೆ ಮುತ್ತಿಗೆ ಕಾರ್ಯಕ್ರಮ ಕೈಬಿಟ್ಟಿದ್ದೇವೆ. ಈ ಸರ್ಕಾರ ಮನೆಗೆ ಹೋಗುವವರೆಗೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಜಿಂದಾಲ್ ಭೂಮಿ‌ ಮಾರಾಟ ವ್ಯವಹಾರದಲ್ಲಿ ಸರ್ಕಾರದ ಪ್ರಮುಖರಿಗೆ ಸಾಕಷ್ಟು ಕಿಕ್ ಬ್ಯಾಕ್ ಬಂದಿರೋ ಅನುಮಾನವಿದೆ. ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಹೇಳಿದರು.
ಬಿಜೆಪಿ ಹಿರಿಯ ಮುಖಂಡ, ಶಾಸಕ ಕೆ ಎಸ್ ಈಶ್ವರಪ್ಪ ಮಾತನಾಡಿ, ಜಿಂದಾಲ್ ಗೆ ಭೂಮಿ ಮಾರಾಟ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಹೀಗೆ ಬಿಟ್ಟರೆ ಇವರು ಇಡೀ ರಾಜ್ಯವನ್ನೇ ಮಾಡುತ್ತಾರೆ ಎಂದರು.
ಸಂಪುಟ ವಿಸ್ತರಣೆ ಬಳಿಕ ನಮ್ಮ ಕಾರ್ಯತಂತ್ರ ಏನೂ ಇಲ್ಲ. ಅತೃಪ್ತರು ಅವರಾಗಿಯೇ ಸರ್ಕಾರದಿಂದ ಹೊರಬರುತ್ತಾರೆ. ಸಚಿವರಾಗಲಿರುವ ಇಬ್ಬರು ಪಕ್ಷೇತರರೂ ಅತೃಪ್ತರ ಜೊತೆಗೆ ಹೊರ ಬರುತ್ತಾರೆ.
ಆಗ ಸರ್ಕಾರ ಅಲ್ಪಮತಕ್ಕೆ ಕುಸಿಯುತ್ತದೆ. ಆಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ನಾವಾಗಿ ನಾವೇ ಅತೃಪ್ತರನ್ನು ಸಂಪರ್ಕಿಸುವ ಕೆಲಸ ಮಾಡುವುದಿಲ್ಲ. ಅತೃಪ್ತರೇ ಬಿಜೆಪಿಗೆ ಬರುತ್ತಾರೆ. ಅತೃಪ್ತರ ಜೊತೆ ಪಕ್ಷೇತರರೂ ಬರುತ್ತಾರೆ ಎಂದು ಈಶ್ವರಪ್ಪ "ಆಪರೇಷನ್ ಕಮಲ"ದ ಸುಳಿವು ನೀಡಿದರು.
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಮೌನವಾಗಿದ್ದಾರೆ. ಪಾಪ ಅವರು ಸೋತು ಹತಾಶರಾಗಿದ್ದಾರೆ, ಹಾಗಾಗಿ ಮೌನ ವಹಿಸಿದ್ದಾರೆ ಎಂದು ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರ ಕಾಲೆಳೆದರು.
ಸಚಿವ ಜಮೀರ್ ಅಹಮದ್ ಹಾಗೂ ಶಾಸಕ ರೋಷನ್ ಬೇಗ್ ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದರೆ ಐಎಂಎ ವಂಚನೆ ಪ್ರಕರಣದ ಸತ್ಯಾಸತ್ಯತೆ ಹೊರಬರಲಿದೆ. ಪ್ರಕರಣದ ತನಿಖೆಯನ್ನು ಎಸ್‌ಐಟಿ ಬದಲಿಗೆ ಸಿಬಿಐಗೆ ನೀಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.
ವಂಚನೆ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳು ಯಾರೆಲ್ಲಾ ಇದ್ದಾರೆ ಎಂಬುದನ್ನು ಪತ್ತೆ ಮಾಡಬೇಕು. ರೋಷನ್ ಬೇಗ್, ಜಮೀರ್ ಅಹಮದ್ ಅವರನ್ನು ಕರೆದುಕೊಂಡು ಹೋಗಿ ಚೆನ್ನಾಗಿ ಪೊಲೀಸ್ ವರ್ಕ್ ಮಾಡಿದರೆ ಸತ್ಯ ಬಾಯಿ‌ ಬಿಡುತ್ತಾರೆ ಎಂದು ಹೇಳಿದರು.
ಈ ರಾಜ್ಯದಲ್ಲಿ ಮಾರಾಟಗಾರರ ಸರ್ಕಾರವಿದೆ. ಕಮೀಷನ್ ಸಿಕ್ಕರೆ ವಿಧಾನಸೌಧವನ್ನೇ ಮಾರಿ ಬಿಡುತ್ತಾರೆ. ಜಿಂದಾಲ್‌ಗೆ ಭೂಮಿ‌ ಮಾರಾಟ ಮಾಡುವ ನಿರ್ಧಾರವನ್ನು ವಾಪಸ್ ಪಡೆಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಐಎಂಎ ವಂಚನೆ ಪ್ರಕರಣದಲ್ಲಿ ಜಮೀರ್ ಮತ್ತು ರೋಷನ್ ಬೇಗ್ ರನ್ನು ಬಂಧಿಸಬೇಕು. ಜಮೀರ್ ಮತ್ತು ರೋಷನ್ ಬೇಗ್ ಇಬ್ಬರೂ ಮೈತ್ರಿ ಪಕ್ಷದ ಕಳ್ಳೆತ್ತುಗಳು. ಎಸ್ ಐಟಿಗೆ ಹೋಗಿ ಹೇಳು ಎಂದು ಸಿದ್ದರಾಮಯ್ಯ ರೋಷನ್ ಬೇಗ್ ಗೆ ಹೇಳುತ್ತಾರೆಯೇ ಹೊರತು ಜಮೀರ್ ಗೆ ಏಕೆ ಹೇಳುವುದಿಲ್ಲ ? ಈ ಪ್ರಕರಣ ಸಿಬಿಐಗೆ ಕೊಟ್ಟು ಜಮೀರ್ ಮತ್ತು ರೋಷನ್ ಬೇಗ್ ನ ಲಾಕಪ್ ಗೆ ಹಾಕಿ ಕ್ರಿಮಿನಲ್ ಗಳನ್ನು ಬೆಂಡೆತ್ತುವಂತೆ ಬೆಂಡತ್ತಿದರೆ ಸತ್ಯ ತಾನಾಗೇ ಹೊರಗೆ ಬರುತ್ತದೆ ಎಂದು ಈಶ್ವರಪ್ಪ ಹೇಳಿದರು
ಬಿಜೆಪಿ ಸಂಸದರು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಪೋರೇಟರ್‌ಗಳು ಧರಣಿಯಲ್ಲಿ ಭಾಗಿಯಾಗಿದ್ದಾರೆ.
ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದ್ದು, ರಾತ್ರಿ ವಾಸ್ತವ್ಯ ಹೂಡಲು ಅನುವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. 150ಕ್ಕೂ ಹೆಚ್ಚಿನ ಜನರಿಗೆ ಅಗತ್ಯವಿರುವ ಹಾಸಿಗೆ, ದಿಂಬು ವ್ಯವಸ್ಥೆ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com