ನಿಮ್ಮ ಶಾಸಕರಿಗೆ ಆಮಿಷ ಒಡ್ಡಿದವರು ಯಾರೆಂದು ಬಹಿರಂಗಪಡಿಸಿ: ಸಿಎಂಗೆ ಬಿಎಸ್ ವೈ ಸವಾಲು

ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹತಾಶರಾಗಿ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಯವರು ಈ ರೀತಿ ಮನಸ್ಸಿಗೆ ಬಂದಂತೆ ಹೇಳುವ ಬದಲು ಯಾವ ಶಾಸಕರಿಗೆ, ಯಾರು ಹಣದ ಆಮಿಷ ಒಡ್ಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ಆರೋಪ ಮಾಡುವುದಕ್ಕಿಂತ ಮೊದಲು ಯಾರಿಗೆ ಆಹ್ವಾನ ಮಾಡಿದರು, ಆಹ್ವಾನಿಸಿದವರ ಹೆಸರೇನು ಎಂದು ಬಹಿರಂಗಪಡಿಸಿದರೆ ಮುಖ್ಯಮಂತ್ರಿಗಳಿಗೂ ಗೌರವ ಬರುತ್ತದೆ. ಇಲ್ಲದಿದ್ದಲ್ಲಿ ಅವರು ತಮ್ಮ ಶಾಸಕರ ಬಗ್ಗೆಯೇ ಅನುಮಾನಪಟ್ಟಂತಾಗುತ್ತದೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಅವರು ಬೇಸರದಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸರ್ಕಾರ ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ಕೈ ಹಾಕುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೂ ಆರೋಪ ಮಾಡುತ್ತಿದ್ದಾರೆ. ಮೈತ್ರಿ ಪಕ್ಷಗಳ 15- 20 ಶಾಸಕರು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಅವರನ್ನು ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಗೊಂದಲವನ್ನು ಪರಿಹರಿಸಿಕೊಳ್ಳಬೇಕು. ಅವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅದನ್ನು ಬಿಟ್ಟು ನಮ್ಮ ವಿರುದ್ಧ ಆರೋಪ ಮಾಡುತ್ತಾ ಕೂರುವುದಲ್ಲ ಸಮಂಜಸವಲ್ಲ. ನಾವು ಪ್ರತಿಪಕ್ಷವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಶೇ.80 ರಷ್ಟು ಭಾಗಗಳಲ್ಲಿ ಮಳೆಯಾಗಿಲ್ಲ. ಕುಡಿಯುವ ನೀರಿನ ತೊಂದರೆ ಇದೆ. ಬರಪರಿಹಾರ ಸಮರ್ಪಕವಾಗಿ ಕಾಮಗಾರಿಗಳು ನಡೆಯುತ್ತಿಲ್ಲ. ಅದರ ಬಗ್ಗೆ ಗಮನ‌ಕೊಡುವುದು ಬಿಟ್ಟು ಕುಮಾರಸ್ವಾಮಿ ಸುಖಾಸುಮ್ಮನೆ ರಾಜಕೀಯ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಆಡಳಿತ ಪಕ್ಷದ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಅಭಿವೃದ್ಧಿಯತ್ತ ಹಾಗೂ ಬರ ಪರಿಹಾರ ಕಾಮಗಾರಿಗಳ ಕಡೆ ಗಮನ ನೀಡಿದರೆ ನಾವು ಕೂಡ ಬೆಂಬಲ ನೀಡುತ್ತೇವೆ ಎಂದರು.
ರೋಷನ್ ಬೇಗ್ ಅಮಾನತು ವಿಷಯ ಕಾಂಗ್ರೆಸ್ ನ ಆಂತರಿಕ ವಿಷಯವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಹೆಸರಲ್ಲಿ ಅಮಾನತು ಮಾಡಿದ್ದಾರೆ. ಸಿದ್ದರಾಮಯ್ಯ ವಿರುದ್ದ ಧ್ವನಿ ಎತ್ತಿದರು ಎಂದು ಅಮಾನತು ಮಾಡಿದ್ದಾರೆ. ನಮಗೂ ಅದಕ್ಕೂ ಸಂಬಂಧವಿಲ್ಲ. ಅವರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಸತ್ಯಸಂಗತಿಗಳನ್ನು ರೋಷನ್ ಬೇಗ್ ಅವರು ಹೇಳಿದ್ದಕ್ಕೆ ಅವರನ್ನು ಅಮಾನತು ಮಾಡಿದ್ದಾರೆ. ಅದನ್ನು ಎದುರಿಸುವ ಶಕ್ತಿ ಅವರಿಗಿದೆ ಎಂದರು.
ಐಎಂಎ ಪ್ರಕರಣದಲ್ಲಿ ರೋಷನ್ ಬೇಗ್ ಹೆಸರು ಕೇಳಿ ಬಂದಿದೆ ನಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದ್ದೇವೆ. ಇಲ್ಲಿಯ ಬಡ ಜನರ ಸಾವಿರಾರು ಕೋಟಿ ರೂ.ಗಳನ್ನು ಲೂಟಿ ಮಾಡಿಕೊಂಡು ಕೊಲ್ಲಿ ರಾಷ್ಟ್ರಗಳಿಗೆ ತೆಗೆದುಕೊಂಡು ಹೋಗಿದ್ದಾರೆ‌. ಪ್ರಕರಣ ಸಿಬಿಐನಿಂದ ತನಿಖೆ ಆಗಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com