ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ: ಕಾಂಗ್ರೆಸ್ ವೀರಶೈವ ಸಮುದಾಯದ ಸಭೆ

ಕಾಂಗ್ರೆಸ್‍ ಪಕ್ಷ ಹಾಗೂ ಮೈತ್ರಿ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್....
ಈಶ್ವರ್ ಖಂಡ್ರೆ
ಈಶ್ವರ್ ಖಂಡ್ರೆ
ಬೆಂಗಳೂರು: ಕಾಂಗ್ರೆಸ್‍ ಪಕ್ಷ ಹಾಗೂ ಮೈತ್ರಿ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ವೀರಶೈವ ಲಿಂಗಾಯತ ಮುಖಂಡರುಗಳ ಸಭೆ ಕರೆಯಲಾಗಿದೆ.
ಇಂದು ರಾತ್ರಿ ನಗರದ ಖಾಸಗಿ ಹೊಟೇಲ್‍ನಲ್ಲಿ ಸಭೆ ಕರೆಯಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸರ್ಕಾರದ ಸಂಪುಟದಲ್ಲಿ ಈ ಸಮುದಾಯಕ್ಕೆ ಇನ್ನು ಹೆಚ್ಚುವರಿ ಮಂತ್ರಿಸ್ಥಾನ ಕೊಡಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆದ್ದು, ಸಭೆಯಲ್ಲಿ ಪಕ್ಷದ ಸಚಿವರುಗಳು, ಶಾಸಕರುಗಳು, ಹಿರಿಯ ಮುಖಂಡರುಗಳು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ವೀರಶೈವ ಲಿಂಗಾಯತ ಸಮುದಾಯದ ಸಭೆ ಕರೆಯಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಸಭೆ ಕರೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. 
ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ. ಪಕ್ಷದ ಅಧ್ಯಕ್ಷನಾಗುವುದಕ್ಕಾಗಿ ಸಭೆ ಕರೆದಿಲ್ಲ. ಮೊದಲು ನಮ್ಮ ಸಮುದಾಯವನ್ನು ಗಟ್ಟಿಗೊಳಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಖಂಡ್ರೆ ಉತ್ತರಿಸಿದರು. 
ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಮತಗಳು ಬಿಜೆಪಿಗೆ ವರದಾನವಾಗಿ ಪರಿಣಮಿಸಿದ್ದು, ಕಾಂಗ್ರೆಸ್ ಗೆ ಕೈಕೊಟ್ಟಿವೆ. ಕಳೆದ ವಿಧಾಸಭಾ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ದಾಳವನ್ನು ಕಾಂಗ್ರೆಸ್ ಉರುಳಿಸಿತ್ತಾದರೂ ಲೋಕಸಭಾ ಚುನಾವಣೆಯಲ್ಲಿ ಇದು ಫಲನೀಡಲಿಲ್ಲ. 
ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ರೋಷನ್ ಬೇಗ್ ಪಕ್ಷದ ನಾಯಕರ ವಿರುದ್ಧ ಹೇಳಿಕೆ ನೀಡಿ, ವೈಯುಕ್ತಿಕ ಟೀಕೆ ಟಿಪ್ಪಣಿ ಮಾಡಿದ್ದಾರೆ. ಬೇಗ್ ಅವರು ಈ ರೀತಿ ಮಾಡುತ್ತಾರೆ ಎನ್ನುವುದನ್ನು ಪಕ್ಷ ಸೇರಿದಂತೆ ಯಾರೂ ಸಹ ನಿರೀಕ್ಷಿಸಿರಲಿಲ್ಲ. ಹೀಗಾಗಿ ಅವರ ವಿರುದ್ಧ ಪಕ್ಷದ ವರಿಷ್ಠರು ಶಿಸ್ತುಕ್ರಮ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ನಡೆಯನ್ನು ಸಮರ್ಥಿಸಿಕೊಂಡರು.
ಪಕ್ಷದಿಂದ ಶಾಸಕ ರಮೇಶ್ ಜಾರಕಿಹೊಳಿ ಅವರು ಬಂಡಾಯವೆದ್ದಿದ್ದಾರಲ್ಲ. ಅವರ ವಿರುದ್ಧ ಪಕ್ಷ ಏಕೆ ಇನ್ನೂ ಶಿಸ್ತು ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಮೇಶ್ ಜಾರಕಿಹೊಳಿ ಅವರ ವಿಚಾರವೇ ಬೇರೆ. ಪಕ್ಷದಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಪಕ್ಷದ ಚೌಕಟ್ಟಿನೊಳಗೆ ಬಗೆಹರಿಸಿಕೊಳ್ಳಬಹುದು. ಆದರೆ ಯಾರೊಬ್ಬರ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸುವುದು ತಪ್ಪು. ತಪ್ಪನ್ನು ತಿದ್ದಿಕೊಳ್ಳುವುದಕ್ಕೆ ಸಮಯ ಕೊಡಲಾಗಿದೆ. ಒಂದು ವೇಳೆ ಜಾರಕಿಹೊಳಿ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ಬಳಿಕ ಅವರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com