ರಾಹುಲ್‌ ಗಾಂಧಿ ಭೇಟಿಯಾದ ಸಿದ್ದರಾಮಯ್ಯ: ರಾಜ್ಯ ರಾಜಕೀಯದ ಬಗ್ಗೆ ಮಹತ್ವದ ಚರ್ಚೆ

ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನವದೆಹಲಿಯಲ್ಲಿಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ...
ರಾಹುಲ್  ಮತ್ತು ಸಿದ್ದರಾಮಯ್ಯ( ಸಂಗ್ರಹ ಚಿತ್ರ)
ರಾಹುಲ್ ಮತ್ತು ಸಿದ್ದರಾಮಯ್ಯ( ಸಂಗ್ರಹ ಚಿತ್ರ)
ನವದೆಹಲಿ: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ನವದೆಹಲಿಯಲ್ಲಿಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ಇದೇ ವೇಳೆ ರಾಹುಲ್ ಗಾಂಧಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅವರಿಗೆ ಶುಭಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರು ಪಕ್ಷ ವಿರೋಧಿ ಹೇಳಿಕೆ ನೀಡಿದ್ದರಿಂದ ಅವರಿಗೆ ಕೆಪಿಸಿಸಿ ನೋಟಿಸ್ ನೀಡಿತ್ತು. ಆದರೆ ಬೇಗ್‌ ಅವರು ಅದಕ್ಕೆ ಉತ್ತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲು ಕೆಪಿಸಿಸಿ ಶಿಫಾರಸು ಮಾಡಿತ್ತು. ಅದರಂತೆ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಪಕ್ಷದಲ್ಲಿ ಯಾವುದೇ ಅಶಿಸ್ತನ್ನು ಸಹಿಸುವುದಿಲ್ಲ ಎಂದು ಹೇಳಿದರು.
ದೆಹಲಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ನಿನ್ನೆ ಕಾಂಗ್ರೆಸ್ ಶಿಸ್ತು ಸಮಿತಿಯ ಅಧ್ಯಕ್ಷ ಎ.ಕೆ.ಆಂಟನಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅವರು ರೋಷನ್ ಬೇಗ್ ನೀಡಿದ್ದ ಹೇಳಿಕೆಯ ಬಗ್ಗೆ ದೂರು ನೀಡಿದ್ದರು ಎನ್ನಲಾಗಿದೆ.
ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾದ ದಿನದಂದೇ  ರೋಷನ್ ಬೇಗ್ ಅವರು ಪಕ್ಷದ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪಕ್ಷ ಸೋಲಲು ಸಿದ್ದರಾಮಯ್ಯ ಕಾರಣ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು “ಬಫೂನ್”, ಸಿದ್ದರಾಮಯ್ಯ ದುರಹಂಕಾರಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೆಪಿಸಿಸಿ, ರೋಷನ್ ಬೇಗ್‌ಗೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿತ್ತು. ಆದರೆ ಬೇಗ್ ನೋಟಿಸ್‌ಗೆ ಉತ್ತರಿಸುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಅದರಂತೆ ಬೇಗ್ ವಿರುದ್ಧ ಕ್ರಮಕೈಗೊಳ್ಳಲು ಕೆಪಿಸಿಸಿ ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ ಎಐಸಿಸಿ ರೋಷನ್ ಬೇಗ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ರೋಷನ್ ಬೇಗ್ ಅವರ ವಿರುದ್ಧ ಪಕ್ಷ ತೆಗೆದುಕೊಂಡ ನಿರ್ಧಾರವನ್ನು ಸಚಿವ ಕೃಷ್ಣಬೈರೇಗೌಡ ಅವರು ಶಿವಮೊಗ್ಗದಲ್ಲಿಂದು ಸಮರ್ಥಿಸಿಕೊಂಡಿದ್ದಾರೆ.
ರೋಷನ್ ಬೇಗ್ ಅವರು ಅವಕಾಶವಾದಿ ರಾಜಕಾರಣಿ. ಅವರನ್ನು ಮಂತ್ರಿ ಮಾಡಲಿಲ್ಲ ಎಂಬ ಏಕೈಕ ಕಾರಣದಿಂದ ಅವರು ಪಕ್ಷದ ವಿರುದ್ಧ ಮಾತನಾಡಿದ್ದಾರೆ. ಅವರನ್ನು ಮಂತ್ರಿ ಮಾಡಿದ್ದರೆ ಎಲ್ಲವೂ ಅವರಿಗೆ ಸರಿಯಾಗಿ ಕಾಣುತ್ತಿತ್ತು. ಅವರ ಎಲ್ಲಾ ಆರೋಪಗಳು ನಿರಾಧಾರ. ಅವರ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ, ಅವರ ವಿರುದ್ಧ ಕ್ರಮಕೈಗೊಂಡಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com