ರಮ್ಯಾ-ಡಾ ಪುಷ್ಪಾ ಅಮರನಾಥ್(ಸಂಗ್ರಹ ಚಿತ್ರ)
ರಮ್ಯಾ-ಡಾ ಪುಷ್ಪಾ ಅಮರನಾಥ್(ಸಂಗ್ರಹ ಚಿತ್ರ)

ರಮ್ಯಾ ಪಕ್ಷಕ್ಕಾಗಿ ಹಗಲಿರುಳು ದುಡಿದಿದ್ದಾರೆ, ಸದ್ಯ ರೆಸ್ಟ್ ನಲ್ಲಿದ್ದಾರೆ: ಡಾ ಪುಷ್ಪಾ ಅಮರನಾಥ್

ಲೋಕಸಭಾ ಚುನಾವಣೆಯಲ್ಲಿ ದಣಿದಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸದ್ಯ ಒಂದು ತಿಂಗಳ ವಿಶ್ರಾಂತಿಯಲ್ಲಿದ್ದು...
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಣಿದಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಸದ್ಯ ಒಂದು ತಿಂಗಳ ವಿಶ್ರಾಂತಿಯಲ್ಲಿದ್ದು, ಶೀಘ್ರವೇ ಪಕ್ಷದ ಚಟುವಟಿಕೆಗೆ ಮರಳಿ ಮತ್ತೆ ಸಕ್ರಿಯರಾಗಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೇಳಿದ್ದಾರೆ.
ಚುನಾವಣೆ ವೇಳೆ ಬಹಳ ಕ್ರಿಯಾಶೀಲವಾಗಿದ್ದು ವಿವಾದಕ್ಕೆ ಸಿಲುಕಿದ್ದ ರಮ್ಯಾ ಅವರು ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಏಕಾಏಕಿ ಕಣ್ಮರೆಯಾಗಿದ್ದರು. ತಮ್ಮ ಟ್ವಿಟರ್ ಖಾತೆಯಿಂದಲೂ ದೂರ ಉಳಿದು ಚರ್ಚೆಗೆ ಗುರಿಯಾಗಿದ್ದರು. ಇದಕ್ಕೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಸ್ಪಷ್ಟನೆ ನೀಡಿದ್ದು, ಚುನಾವಣೆಯ ಸಂದರ್ಭದಲ್ಲಿ ರಮ್ಯಾ ನೇತೃತ್ವದ ಸಾಮಾಜಿಕ ಜಾಲತಾಣದ ತಂಡ ದಿನದ 24 ಗಂಟೆಯೂ ಕೆಲಸ ಮಾಡಿತ್ತು. ಹೀಗಾಗಿ ಸ್ವಲ್ಪ ಅವರಿಗೂ ವಿಶ್ರಾಂತಿ ಬೇಕು ಅಂತ ಅನಿಸಿರುತ್ತದೆ. ಸದ್ಯ ವಿಶ್ರಾಂತಿಯಲ್ಲಿದ್ದು ನಂತರ ಸಕ್ರಿಯರಾಗಲಿದ್ದಾರೆ ಎಂದು ಹೇಳಿದರು.
ರಮ್ಯಾ ಅವರು ಸಕ್ರಿಯರಾಗಿಲ್ಲ ಎನ್ನುವುದಕ್ಕೆ ಯಾವುದೇ ಸಾಕ್ಷಿಯಿಲ್ಲ. ಕಳೆದ ಆರೇಳು ತಿಂಗಳಿನಿಂದ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಹಳ ಸಕ್ರಿಯವಾಗಿ ರಾಜಕೀಯ ಹಾಗೂ ಪಕ್ಷ ಸಂಘಟನೆಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿಕೊಂಡು ಯಶಸ್ವಿಯಾಗಿದ್ದರು. ಬಹಳಷ್ಟು ಟಾರ್ಗೆಟ್ ಮಾಡಿ ಬಿಜೆಪಿ ವೈಫಲ್ಯಗಳನ್ನು ತೋರಿಸುವ ಮೂಲಕ ಹೆಚ್ಚು ಕೆಲಸ ಮಾಡಿದ್ದರು ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು, ಎಂದರು.
ರಮ್ಯಾ ಅವರು ಚುನಾವಣೆ ಸಮಯದಲ್ಲಿ ಸಮೀಕ್ಷೆಗಾಗಿ 8 ಕೋಟಿ ಹಣ ಪಡೆದಿದ್ದಾರೆ ಎಂಬ ಆರೋಪ ಸುಳ್ಳಾಗಿದೆ. ಅಂತಹ ಸಂದರ್ಭ ಬಂದಿರಲು ಸಾಧ್ಯವೇ ಇಲ್ಲ ಎಂದು ನಾನು ಅಂದುಕೊಳ್ಳುತ್ತೇನೆ. ಹೀಗಾಗಿ ಸತ್ಯ ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆರೋಪ ನಿಜ ಆದರೆ ಸಾಕ್ಷಿಗಳನ್ನು ಕೊಡಲಿ. ಸುಮ್ಮನೆ ಗಾಳಿ ಸುದ್ದಿ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ರಮ್ಯಾ-ನಾವು ಉತ್ತಮ ಸ್ನೇಹಿತರು, ದೆಹಲಿಗೆ ಹೋದಾಗ ನಾನು ಅವರನ್ನು ಭೇಟಿ ಮಾಡುತ್ತೇನೆ. ಅವರೊಬ್ಬರು ಪಕ್ಷದ ಕಾರ್ಯಕರ್ತರಾಗಿ ಏನು ಕೆಲಸ ಮಾಡಬೇಕೋ ಅದನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಗಿದೆ. ಆದರೆ ನಮ್ಮ ಕೆಲಸ, ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ, ಮುಂದಿನ ಕಾರ್ಯಕ್ರಮಗಳನ್ನು ಆರಂಭಿಸಲಿದ್ದೇವೆ ಎಂದರು.

Related Stories

No stories found.

Advertisement

X
Kannada Prabha
www.kannadaprabha.com