ಸರ್ಕಾರವನ್ನು ಉಳಿಸಿಕೊಂಡು ಹೋಗೋದು ಕಾಂಗ್ರೆಸ್ ಕೈಯಲ್ಲಿದೆ: ಹೆಚ್.ಡಿ.ದೇವೇಗೌಡ

ನಾಲ್ಕು ವರ್ಷ ಮೈತ್ರಿ ಸರ್ಕಾರಕ್ಕೆ ನನ್ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಕಾಂಗ್ರೆಸ್ ನಾಯಕರಿಗೂ ಇದೆ....

Published: 21st June 2019 12:00 PM  |   Last Updated: 21st June 2019 08:28 AM   |  A+A-


HD Deve Gowda

ಹೆಚ್.ಡಿ.ದೇವೇಗೌಡ

Posted By : RHN RHN
Source : UNI
ಬೆಂಗಳೂರು: ನಾಲ್ಕು ವರ್ಷ ಮೈತ್ರಿ ಸರ್ಕಾರಕ್ಕೆ ನನ್ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಸರ್ಕಾರವನ್ನು ಉಳಿಸಿಕೊಂಡು ಹೋಗುವ  ಜವಾಬ್ದಾರಿ ಕಾಂಗ್ರೆಸ್ ನಾಯಕರಿಗೂ ಇದೆ. ಮತ್ತೆ ಕಾಂಗ್ರೆಸ್ ನಡೆ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ  ಪರಾಜಿತಗೊಂಡ ಜೆಡಿಎಸ್ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕಮ ನಡೆಯಿತು. 

ಸಭೆಯನ್ನುದ್ದೇಶಿಸಿ ಹೆಚ್.ಡಿ.ದೇವೇಗೌಡ ಮಾತನಾಡಿ,  ನಾನು  ಪಕ್ಷ ಸಂಘಟನೆ ಮಾಡತ್ತೇನೆ. ಆದರೆ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗುವ ರೀತಿಯಲ್ಲಿ  ಯಾವುದೇ ಹೇಳಿಕೆಗಳನ್ನು ಕೊಡುವುದಿಲ್ಲ. ಸಿದ್ದರಾಮಯ್ಯ ಸಹ ಪಕ್ಷ ಸಂಘಟನೆ ಮಾಡಿದರೆ  ನಾನು ಬೇಡ ಎನ್ನುವುದಿಲ್ಲ.  ಕಾಂಗ್ರೆಸ್ ನಾಯಕರು  ಸರ್ಕಾರಕ್ಕೆ ಹಾನಿಯಾಗುವಂತಹ  ಹೇಳಿಕೆಗಳನ್ನು ಕೊಡಬಾರದು ಎಂದರು.

ಮೈತ್ರಿ ಸರ್ಕಾರ ಮುಂದುವರಿದು ಹೋಗುತ್ತದೆಯಾದರೂ ಅದು ನನಗೆ ಸಂಬಂಧವಿಲ್ಲ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ - ಜೆಡಿಎಸ್ ನಾಯಕರು ಸಹೋದರರಂತೆ ನಡೆದುಕೊಳ್ಳುವುದು ಅವರಿಗೆ ಬಿಟ್ಟಿರುವ ವಿಷಯ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮಧ್ಯೆ ಪ್ರಾದೇಶಿಕ ಪಕ್ಷ ಕಟ್ಟುವುದು ಅಷ್ಟು ಸುಲಭದ ಕೆಲಸವಲ್ಲ . ಕೆಲವು ಕ್ಷೇತ್ರಗಳಲ್ಲಿ ಪಕ್ಷದಿಂದ ಹೆಚ್ಚಿನ ಸಹಾಯ ಮಾಡಲು ಸಾಧ್ಯವಾಗದೇ ಇದ್ದರೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷದಿಂದ ಹೆಚ್ಚಿನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.

2018 ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನ ಗಳಿಸಿದ ಬಿಜೆಪಿ ಮೂರು ದಿನ ಸರ್ಕಾರ ರಚನೆ ಮಾಡಿತು. ಬಳಿಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು.ಮೂರು ದಿನ ಮುಖ್ಯಮಂತ್ರಿಯಾದವರನ್ನು ಜೆಡಿಎಸ್-ಕಾಂಗ್ರೆಸ್ ನಾಯಕರು ಹುದ್ದೆಯಿಂದ ಕೆಳಗಿಳಿಸಿದರಲ್ಲ ಎನ್ನುವ ನೋವು ಬಿಜೆಪಿಗೆ ಇದೆ. ಈ ರೀತಿ ಆದರೆ ಯಾರೂ ಸಹ ಸುಮ್ಮನೆ ಕೂರುವುದಿಲ್ಲ.ಹೀಗಾಗಿ ಛಲದಿಂದ ಬಿಜೆಪಿ ನಾಯಕರು ಸರ್ಕಾರ ರಚನೆಗೆ ಪ್ರಯತ್ನಿಸುತ್ತಲೇ ಇದ್ದಾರೆ. ಮೈತ್ರಿ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ನ 5, ಕಾಂಗ್ರೆಸ್‍ನ 8 ಶಾಸಕರು ಬಿಜೆಪಿಗೆ ಸೇರುತ್ತಾರೆ ಎಂದು ಹೇಳುತ್ತಲೇ ಇದ್ದಾರೆ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ಮೈತ್ರಿ ಸರ್ಕಾರದಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಶಾಸಕರೆಲ್ಲ ನಮ್ಮೊಂದಿಗೆಯೇ ಇದ್ದಾರೆ. ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ಜೊತೆಗೆ ಇದ್ದಾರೆ ಎಂದು ದೇವೇಗೌಡ ಒಗಟಿನಂತೆ ಮಾತನಾಡಿದರು.

ಈ ಒಂದು ವರ್ಷದ ಮೈತ್ರಿ ಸರ್ಕಾರ ಮಾಡಿರುವ ಸಾಧನೆ ಕೇವಲ ಕುಮಾರಸ್ವಾಮಿ ಅವರೊಬ್ಬರ ಸಾಧನೆಯಲ್ಲ. ಮೈತ್ರಿ ಸರ್ಕಾರವೆಂದರೆ ಕುಮಾರಸ್ವಾಮಿ ಅವರೊಬ್ಬರ ಸರ್ಕಾರ ಮಾತ್ರವಲ್ಲ. ಒಂದು ವರ್ಷದ ಸಾಧನೆಯನ್ನು ಕುಮಾರಸ್ವಾಮಿ ಒಬ್ಬರೇ ಮಾಡಿದ್ದಾರೆ ಎಂದು ಹೇಳಲು ಬರುವುದಿಲ್ಲ.ಇದು ಕಾಂಗ್ರೆಸ್ ಜೆಡಿಎಸ್ ಎರಡೂ ಪಕ್ಷದ ಸಾಧನೆ. ಮೈತ್ರಿ ಸರ್ಕಾರದ ಸಾಧನೆ ಕುರಿತ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮೂರ್ನಾಲ್ಕು ಸಚಿವರು,  ಮುಖ್ಯ ಕಾರ್ಯದರ್ಶಿಗಳು ಮಾತ್ರ ಕುಮಾರಸ್ವಾಮಿ ಅವರ ಜೊತೆಯಲ್ಲಿದ್ದರು. ಇದೆಲ್ಲವನ್ನು  ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಮೈತ್ರಿ ಸರ್ಕಾರದ ಸಾಧನೆ, ಪುಸ್ತಕ ಬಿಡುಗಡೆ ಸಂದರ್ಭವನ್ನು ಯಾರೂ ಹೇಗೆ ವ್ಯಾಖ್ಯಾನಿಸುತ್ತಾರೋ ಗೊತ್ತಿಲ್ಲ ಎಂದರು. 

ಪಂಚಾಯತ್ ಚುನಾವಣೆ ಯಾವಾಗ ಘೋಷಣೆಯಾಗುತ್ತದೆಯೋ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಲಿದೆ. ಚುನಾವಣೆ ಈಗಲೇ ಬರಲೀ ಅಥವಾ ನಾಲ್ಕು ವರ್ಷಗಳಾದ ಮೇಲೆ ಯಾವಾಗಲಾದರೂ ಎದುರಾಗಲಿ. ಚುನಾವಣೆ ನಡೆಯುವವರೆಗೂ ನಾವು ಜನರ ಬಳಿ ಹೋಗಲೇಬೇಕು. ಪಕ್ಷ ಸಂಘಟನೆ ಮಾಡಲೇಬೇಕು. ಚುನಾವಣೆ ಘೋಷಣೆಯಾದ ಮೇಲೆ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಬಾರದು. ಕೊನೆ ಕ್ಷಣದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಿ.ಫಾರಂ ಕೇಳಬಾರದು. ಈಗಿನಿಂದಲೇ ಜನರ ಮಧ್ಯೆ ಕೆಲಸ ಮಾಡಿ ಪಕ್ಷ ಬಲಗೊಳಿಸಬೇಕು ಎಂದು ಕರೆ ನೀಡಿದರು. 

ತುಮಕೂರಿನಲ್ಲಿ ಪರಾಜಯಗೊಂಡ ಬಗ್ಗೆ ನಾನೂ ಈವರೆಗೂ ರಾಹುಲ್ ಗಾಂಧಿ ಅವರ ಬಳಿಯಾಗಲಿ ಬೇರೆ ಯಾರ ಬಳಿಯೂ ಆಗಲಿ ಇದೂವರೆಗೂ ಚರ್ಚೆ ನಡೆಸಿಲ್ಲ.  ಗೆದ್ದವರ ಸೀಟು ಕೊಡಿ ಎಂದು ರಾಹುಲ್ ಗಾಂಧಿಗೆ ಕೇಳಿಲ್ಲ. ಸೋಲಿನ ಬಗ್ಗೆ ಉಸಿರು ಕೂಡ ಎತ್ತಿಲ್ಲ. ಆದರೆ ಪ್ರಾದೇಶಿಕ ಪಕ್ಷವನ್ನು ಬೆಳೆಸಬೇಕು ಎಂದು ಪಣ ತೊಟ್ಟಿದ್ದೇನೆ ಎಂದು ಸೂಚ್ಯವಾಗಿ ಮಾತನಾಡಿದರು.
ಕುಮಾರಸ್ವಾಮಿ ಎಲ್ಲರನ್ನೂ ಮೆಚ್ಚಿಸಿ ಕೆಲಸ ಮಾಡುವುದು ಕಷ್ಟ.  20-20 ಸರ್ಕಾರದಲ್ಲಿ ಕುಮಾರಸ್ವಾಮಿಗೆ ಒಂದು ಗುಂಪು ಸಹಕಾರ ಕೊಡಲಿಲ್ಲ . ಅವರು ರೂಪಿಸಿದ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಹಕರಿಸಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.

ಮೇಲ್ಮನೆ ಸದಸ್ಯ ಬಿ.ಎಂ.ಫಾರೂಖ್ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ. ಸಚಿವರನ್ನಾಗಿ ಮಾಡದಿದ್ದರೂ ಅವರು ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಹೇಳಲಿಲ್ಲ. ಸುಮಾರು ಜನ ಮುಸ್ಲಿಂರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ಫಾರೂಖ್ ಹಾಗೆ ಮಾಡುವುದಿಲ್ಲ ಎಂದಿದ್ದಾರೆ ಎನ್ನುವ ಮೂಲಕ ಶಾಸಕ ಹೆಚ್.ವಿಶ‍್ವನಾಥ್ ಅವರಿಗೆ ತಿರುಗೇಟು ನೀಡಿದರು.

 25 ಸಾವಿರ ಮಹಿಳೆಯರನ್ನು ಸೇರಿಸಿ ಮಹಿಳಾ ಸಮಾವೇಶ, ಅಲ್ಪಸಂಖ್ಯಾತರ,  ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸಮಾವೇಶ ಮಾಡಲು ಚಿಂತಿಸಲಾಗಿದೆ. ಇನ್ನೂ ನಾಲ್ಕು ವರ್ಷ ಮೈತ್ರಿ ಸರ್ಕಾರ ಸುಗಮವಾಗಿ ನಡೆಯಲಿ. ಈ ನಾಲ್ಕು ವರ್ಷ  ದೇವೇಗೌಡನಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಭಾವಿಸುವುದೇ ತಪ್ಪು. ಪಕ್ಷ ಸಂಘಟನೆಯತ್ತ  ನಾನು ಚಿತ್ತ ಹರಿಸಿದ್ದೇನೆ. ಲೋಕಸಭೆ ಚುನಾವಣೆಯ ಸೋಲು ಮುಂದಿನ ಚುನಾವಣೆಯ ಗೆಲುವಿಗೆ  ಸೋಪಾನವಾಗಲಿದೆ ಎಂದರು. 
ತಮಿಳುನಾಡಿನಲ್ಲಿ ಕರುಣಾನಿಧಿ ಕುಟುಂಬದ ಏಳು ಸದಸ್ಯರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಮೂರು ವ್ಹೀಲ್ ಚೇರ್ ಮೇಲೆಯೇ ಕರುಣಾನಿಧಿ ರಾಜಕಾರಣ ಮಾಡಿದ್ದಾರೆ. ಆದರೆ ನಮ್ಮ ಕುಟುಂಬದಲ್ಲಿ ಮೊಮ್ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಕ್ಕೆ ಹಲವು ರೀತಿಯಲ್ಲಿ ಮನಸಿಗೆ ನೋವಾಗುವಂತೆ ಟೀಕೆ ಮಾಡಿದರು ಎಂದರು.

ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ಮಾತನಾಡಿ, ದೇವೇಗೌಡರು ಯಾವಾಗ ಯಾವ ರೀತಿಯ ರಾಜಕೀಯ ತಂತ್ರ ಯೋಜನೆಗಳನ್ನು ರೂಪಿಸುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಇವರು ಮಾಡಿರುವ ತಂತ್ರಗಳು ಎದುರಾಳಿಗಳನ್ನು ಪಜೀತಿಗೆ ಸಿಲುಕಿಸಿದೆ. ತುಮಕೂರಿನಲ್ಲಿ ದೇವೇಗೌಡರು ಪರಾಜಿತಗೊಂಡಿದ್ದಕ್ಕೆ ಎಲ್ಲವೂ ಮುಗಿಯಿತು ಎಂದು ಹಲವರು ಹೇಳಿದ್ದರು. ಆದರೆ ದೇವೇಗೌಡರು ಸೋಲಿನಿಂದ ಎಂದಿಗೂ ಧೃತಿಗೆಡುವುದಿಲ್ಲ. ಹಿಂದೆ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿಯೂ ಅವರು ಪರಾಜಿತಗೊಂಡಿದ್ದರು. ಕೇವಲ 2 ಸ್ಥಾನಗಳನ್ನಿಟ್ಟುಕೊಂಡು ಇದೂವರೆಗೂ ಪಕ್ಷವನ್ನು ಸದೃಢವಾಗಿ ಕಟ್ಟಿದ್ದಾರೆ ಎಂದರು.

ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆ ಮೂಲಕ ಜನರನ್ನು ತಲುಪುವ ಕೆಲಸ ಮಾಡಲಾಗುವುದು.  ಆಗಸ್ಟ್ ತಿಂಗಳಿನಲ್ಲಿ ಎರಡು ಹಂತದಲ್ಲಿ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದ್ದು, ಕಾವೇರಿಯಿಂದ ತುಂಗಭದ್ರೆಯವರೆಗೂ ಮೊದಲ ಹಂತದಲ್ಲಿ ಎರಡನೇ ಹಂತದಲ್ಲಿ ತುಂಗಭದ್ರೆಯಿಂದ ಮಲಪ್ರಭೆವರೆಗೂ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ ಎಂದರು. 

ತುಮಕೂರು ಲೋಕಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ  ಹೆಚ್.ಡಿ.ದೇವೇಗೌಡ,ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.  ಅದೇ ರೀತಿ ವಿವಿಧ  ಚುನಾವಣೆಯಲ್ಲಿ ಪರಾಜಿತಗೊಂಡ ಪಕ್ಷದ ಅಭ್ಯರ್ಥಿಗಳನ್ನು ಪಕ್ಷ ಪರಿಗಣಿಸುತ್ತಿದ್ದು, ಅವರು  ಸಹ ಸೋಲಿನಿಂದ ಧೃತಿಗೆಡದೆ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂಬ ಉದ್ದೇಶದಿಂದ ಜೆಡಿಎಸ್  ಪರಾಜಿತ ಅಭ್ಯರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಗೈರಾಗಿದ್ದು ಎದ್ದುಕಾಣುತ್ತಿತ್ತು. 

ಶಾಸಕರಾದ  ಗೋಪಾಲಯ್ಯ, ದೇವಾನಂದ್ ಚೌವ್ಹಾಣ್, ಅಶ್ವಿನ್ ಗೌಡ, ಟಿ.ಎ.ಶರವಣ, ಮಾಜಿ ಶಾಸಕರಾದ   ಶಾರದಾ ಪೂರ್ಯ ನಾಯ್ಕ, ಬಿ ಬಿ ನಿಂಗಯ್ಯ, ಆನಂದ್ ಅಸ್ನೋಟಿಕರ್ ಮತ್ತಿತರರು   ಉಪಸ್ಥಿತರಿದ್ದರು.
Stay up to date on all the latest ರಾಜಕೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp