ಸಂಚಲನ ಮೂಡಿಸಿದ ದೇವೇಗೌಡರ ಹೇಳಿಕೆ: ಮಧ್ಯಂತರ ಚುನಾವಣೆ ಬಗ್ಗೆ ಯಾರು ಏನು ಹೇಳಿದ್ರು?

ರಾಜ್ಯ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ಮಧ್ಯಂತರ ಚುನಾವಣೆ ನಡೆಯುವುರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಮಾಜಿ ಪ್ರದಾನಿ ದೇವೇಗೌಡರ ,...
ದೇವೇಗೌಡರ ಹೇಳಿಕೆಗೆ ಪ್ರಮುಖ ನಾಯಕರ ಪ್ರತಿಕ್ರಿಯೆ
ದೇವೇಗೌಡರ ಹೇಳಿಕೆಗೆ ಪ್ರಮುಖ ನಾಯಕರ ಪ್ರತಿಕ್ರಿಯೆ
ಬೆಂಗಳೂರು:  ರಾಜ್ಯ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ, ಮಧ್ಯಂತರ ಚುನಾವಣೆ ನಡೆಯುವುರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಮಾಜಿ ಪ್ರದಾನಿ ದೇವೇಗೌಡರ ಹೇಳಿಕೆಗೆ ಸಿಎಂ ಎಚ್.ಡಿ ಕುಮಾರ ಸ್ವಾಮಿ ಹೀಗೆ ಹೇಳಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಪ್ರಶ್ನೆಯೇ ಇಲ್ಲ, ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿರುತ್ತದೆ. ಅದೆಲ್ಲಾ ಮುಗಿದ ಕಥೆ, ದೊಡ್ಡದು ಮಾಡುವ ಅವಶ್ಯಕತೆಯಿಲ್ಲ, ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ, ಅವೆಲ್ಲಾವನ್ನು ಸರಿಪಡಿಸಿಕೊಂಡು ಹೋಗಬೇಕು, ಅದೇ ಅಲ್ಲವೇ ಮೈತ್ರಿ ಧರ್ಮ ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್, ದೇವೇಗೌಡರು  ಪ್ರಧಾನಿಯಾಗಿದ್ದವರು, ಅವರ ಅಭಿಪ್ರಾಯ ತಿಳಿಸಿದ್ದಾರೆ. ಅವರ ಮಾತನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಕಾಂಗ್ರೆಸ್ ನವರು ಸರ್ಕಾರ ರಚನೆ ಮಾಡುವಂತೆ ಕೇಳಿಕೊಂಡು ಬಂದಿದ್ದರು ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಸಿಎಂ ಮಾಡುವ ಬಗ್ಗೆ ರಾಹುಲ್ ಗಾಂಧಿ ಅವರ ಜೊತೆ ಚರ್ಚೆ ಆಗಿತ್ತು, ನಾವು ಕೂಡ ಒಪ್ಪಿದ್ದೆವು. ದೇವೇಗೌಡರ ಹೇಳಿಕೆ ಸಂಬಂಧ ನಾನು ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಕುಳಿತು  ಸಂಬಂಧ ಚರ್ಚೆ ಮಾಡುತ್ತೆವೆ ಎಂದು ಹೇಳಿದ್ದಾರೆ,
ರಾಜ್ಯದಲ್ಲಿ ಇರುವುದು ಮೈತ್ರಿ ಸರ್ಕಾರವಲ್ಲ, ದ್ರೋಹಿಗಳ ಸರ್ಕಾರ, ಯೋಗ್ಯತೆ ಇದ್ದರೆ ಆಡಳಿತ ನಡೆಸಲಿ, ಇಲ್ಲದಿದ್ದರೇ ಬಿಟ್ಟು ಹೋಗಲಿ ಎಂದು ಮಾಜಿ ಯಡಿಯೂರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 
ಮಧ್ಯಂತರ ಚುನಾವಣೆ ನಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಜೆಡಿಎಸ್ ನವರು ಮಧ್ಯಂತರ ಚುನಾವಣೆ ಬೇಕು ಎನ್ನುತ್ತಾರೆ, ಕಾಂಗ್ರೆಸ್ ನವರು ಬೇಡ ಎನ್ನುತ್ತಾರೆ.  ನಾವು 105 ಶಾಸಕರಿದ್ದೇವೆ, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಗೊಂದಲ ಇದ್ದೇ ಇದೆ, ಕುಮಾರಸ್ವಾಮಿ ಪ್ರತಿದಿನ ಕಣ್ಣೀರು ಹಾಕುತ್ತಿದ್ದಾರೆ ಎಂದು  ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಇನ್ನೂ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಡಿ.ಕೆ ಶಿವಕುಮಾರ್, ದೇವೇಗೌಡರಿಗೆ ಯಾವುದೇ ಅಸಮಾಧಾನವಿಲ್ಲ, ಮೈತ್ರಿಯಲ್ಲಿ ಯಾವುದೇ ಅಸಮಾಧಾನವಿಲ್ಲ, ಅವರು ಯಾಕೆ ಈ ರೀತಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ, ಅದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com