ಹಳದಿ ಕಣ್ಣಿನವರಿಗೆ ಎಲ್ಲವೂ ಹಳದಿಯೇ: ಬಿಎಸ್ ವೈಗೆ ದೇವೇಗೌಡ ತಿರುಗೇಟು

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 20-20 ಸರ್ಕಾರದಲ್ಲಿ ಮಾಡಿದ ಗ್ರಾಮವಾಸ್ತವ್ಯದ ಬಗ್ಗೆ ಹಳ್ಳಿ ಜನರನ್ನೇ ಹೋಗಿ ಕೇಳಬೇಕೇ ಹೊರತು...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು 20-20 ಸರ್ಕಾರದಲ್ಲಿ ಮಾಡಿದ ಗ್ರಾಮವಾಸ್ತವ್ಯದ ಬಗ್ಗೆ ಹಳ್ಳಿ ಜನರನ್ನೇ ಹೋಗಿ ಕೇಳಬೇಕೇ ಹೊರತು ಈ ಬಗ್ಗೆ ತಾವು ಮಾತನಾಡುವುದು ಸರಿಯಲ್ಲ. ಹಳದಿ ಕಣ್ಣಿನವರಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ತಿರುಗೇಟು ನೀಡಿದ್ದಾರೆ.
'ಗ್ರಾಮವಾಸ್ತವ್ಯ-ಶೂನ್ಯ ಸಾಧನೆ' ಬಿಜೆಪಿ ಕಿರುಹೊತ್ತಿಗೆ ಬಿಡುಗಡೆ ಕುರಿತು ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ, ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು, ಗ್ರಾಮೀಣ ಜನರಿಗೆ ಹೇಗೆ ಸ್ಪಂದಿಸಿದ್ದರು ಎನ್ನುವ ಬಗ್ಗೆ ಗ್ರಾಮವಾಸ್ತವ್ಯದ ಫಲಾನುಭವಿಗಳೇ ಬಿಜೆಪಿ ನಾಯಕರಿಗೆ ಉತ್ತರ ಕೊಡುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಐಎಂಎ ಹಗರಣ ಆರೋಪಿ ಮನ್ಸೂರ್ ಖಾನ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆ ಭೋಜನ ಸ್ವೀಕರಿಸಿದ್ದರು ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಕಿಡಿಕಾರಿದ ಅವರು, ಹಗರಣದಲ್ಲಿ ಯಾರುಯಾರು ಭಾಗಿಯಾಗಿದ್ದಾರೆ ಎನ್ನುವುದನ್ನು ಮನ್ಸೂರ್ ಖಾನ್ ಅವರೇ ಖುದ್ದಾಗಿ ಬಂದು ಪೊಲೀಸರಿಗೆ ಹೇಳುತ್ತೇನೆ ಎಂದಿದ್ದಾನೆ. ಮನ್ಸೂರ್ ಖಾನ್ ಶರಣಾಗತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಆಗ ಅವನೇ ಎಲ್ಲರ ಹೆಸರು ಹೇಳುತ್ತಾನೆ. ಅವನು ಯಾರಯಾರ ಹೆಸರನ್ನು ಹೇಳುತ್ತಾನೆ ಎನ್ನುವುದನ್ನು ಕಾದುನೋಡೋಣ. ಮುಖ್ಯಮಂತ್ರಿ ಅವನಿಂದ ಎಷ್ಟು ತಗೊಂಡಿದ್ದಾರೆ, ಇನ್ನೊಬ್ಬರು ಎಷ್ಟು ತಗೊಂಡಿದ್ದರು ಎನ್ನುವುದನ್ನು ಆತನೇ ಹೇಳಲಿ ಎಂದರು.
ಐಎಂಎ ಜ್ಯುವೆಲ್ಸ್ ಮುಚ್ಚುವಂತೆ ಮೇಲ್ಮನೆ ಸದಸ್ಯ ಶರವಣ ಹೇಳಿದ್ದರು ಎಂಬ ಮನ್ಸೂರ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವೇಗೌಡ, ಯಾರ ಹೆಸರಿನ ಬಗ್ಗೆ ನಾನು ಪ್ರಶ‍್ನೆ ಮಾಡುವುದಿಲ್ಲ. ಪ್ರಕರಣವನ್ನು ಎಸ್ಐಟಿಗೆ ವಹಿಸಲಾಗಿದ್ದು, ತಂಡದಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ. ಅವರು ತನಿಖೆ ಕೈಗೊಳ್ಳುತ್ತಾರೆ. ಶರವಣ ಹೆಸರನ್ನು ಮನ್ಸೂರ್ ಖುದ್ದಾಗಿ ಬಂದು ಹೇಳಲಿ. ಆ ನಂತರ ನೋಡೋಣ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com