ಸಮಸ್ಯೆ ಪರಿಹರಿಸಲು ನಾವು ಬೇಕು, ವೋಟ್ ಮೋದಿಗೆ ಹಾಕ್ತೀರಾ: ಬಸ್ ತಡೆದ ವೈಟಿಪಿಎಸ್ ನೌಕರರ ಮೇಲೆ ಸಿಎಂ ಗರಂ

ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೋಗುತ್ತಿದ್ದ...
ರಾಯಚೂರಿನ ಕರೇಗುಡ್ಡಕ್ಕೆ ಬಸ್ಸಿನಲ್ಲಿ ಹೋಗುತ್ತಿರುವ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಳಿ ಸಮಸ್ಯೆ ಹೇಳಿಕೊಳ್ಳಲು ಬರುತ್ತಿರುವ ಜನರು
ರಾಯಚೂರಿನ ಕರೇಗುಡ್ಡಕ್ಕೆ ಬಸ್ಸಿನಲ್ಲಿ ಹೋಗುತ್ತಿರುವ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಳಿ ಸಮಸ್ಯೆ ಹೇಳಿಕೊಳ್ಳಲು ಬರುತ್ತಿರುವ ಜನರು
ಕರೇಗುಡ್ಡ (ರಾಯಚೂರು): ರಾಯಚೂರು ಜಿಲ್ಲೆಯ ಕರೇಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಗ್ರಾಮ ವಾಸ್ತವ್ಯ ಮಾಡಲು ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೋಗುತ್ತಿದ್ದ ವೇಳೆ  ದಾರಿಯಲ್ಲಿ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರಿಂದ ಅವರ ಮೇಲೆ ಸಿಎಂ ಸಿಟ್ಟಿನಿಂದ ರೊಚ್ಚಿಗೆದ್ದ ಘಟನೆ ಬುಧವಾರ ನಡೆದಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಯರಮರಸ್ ಸರ್ಕೀಟ್ ಹೌಸ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೈಟಿಪಿಎಸ್‍ನ ನೂರಾರು ಜನ ಕಾರ್ಮಿಕರು ಸಿಎಂ ಬಸ್‍ಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಟ್ಟಿಗೆದ್ದ ಮುಖ್ಯಮಂತ್ರಿಗಳು, ನರೇಂದ್ರ ಮೋದಿಗೆ ವೋಟ್ ಹಾಕಿ ನಮ್ಮತ್ರ ಸಮಸ್ಯೆ ಬಗೆಹರಿಸಿ ಅಂತೀರಾ? ನಿಮಗೆಲ್ಲಾ ಮರ್ಯಾದೆ ಕೊಡಬೇಕೇ? ಲಾಠಿಚಾರ್ಜ್ ಮಾಡ್ಬೇಕು ನಿಮಗೆ ಎಂದು ಹೇಳಿ ಪ್ರತಿಭಟನಾಕಾರರ ಮೇಲೆ ಕೂಗಾಡಿದರು. ನೀವು ಹೀಗೆ ಮಾಡಿದರೆ ನಾನು ಗ್ರಾಮವಾಸ್ತವ್ಯ ಮಾಡುವುದಿಲ್ಲ ಎಂದು ಹೇಳಿದರು.
ನಂತರ ಸಿಟ್ಟು ಕಡಿಮೆ ಮಾಡಿಕೊಂಡ ಸಿಎಂ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ರಸ್ತೆ ತಡೆದು ಯಾಕೆ ಪ್ರತಿಭಟನೆ ನಡೆಸುತ್ತೀರಿ?. ನೇರವಾಗಿ ನನ್ನ ಬಳಿ ಯಾಕೆ ಬಂದಿಲ್ಲ? ಎಂದು ಕೇಳಿದರು. 
ಮಾನ್ವಿ ತಾಲೂಕಿನ ಕಲ್ಲೂರಿಗೆ ಕುಡಿಯುವ ನೀರಿನ ಸರಬರಾಜು ಯೋಜನೆ ಮತ್ತು ಪದವಿ ಕಾಲೇಜು ತೆರಯುವ ಭರವಸೆ ನೀಡಿದರು. ಇದೇ ವೇಳೆ ಕಿವಿ ಕೇಳದ ಗ್ರಾಮದ ಮಗುವೊಂದರ ಚಿಕಿತ್ಸೆಗೆ ಹಣ ನೀಡುವ ಭರವಸೆ ನೀಡಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರುವಂತೆ ಸೂಚನೆ ನೀಡಿದರು.
ಸಿಎಂ ಅವರ ಈ ಮಾತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ರಾಜ್ಯದ ಆರೂವರೆ ಕೋಟಿ ಜನರಿಗೆ ಸಿಎಂ ಆಗಿರುವ ವ್ಯಕ್ತಿಯಿಂದ ಇಂತಹ ಮಾತುಗಳನ್ನು ಜನರು ನಿರೀಕ್ಷಿಸುವುದಿಲ್ಲ. ಇಂತಹ ಮನೋಧರ್ಮ ಇಟ್ಟುಕೊಂಡು ಅವರು ಗ್ರಾಮ ವಾಸ್ತವ್ಯ ಮಾಡುವುದು ಯಾರನ್ನು ಮೆಚ್ಚಿಸಲು? ಜನರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಪರಿಹಾರ ನೀಡಲು ಅವರು ಗ್ರಾಮ ವಾಸ್ತವ್ಯಕ್ಕೆ ಹೊರಟಿರುವುದು, ಆ ಕೆಲಸ ಮಾಡಲಿ ಎಂದು ಪ್ರತಿಪಕ್ಷ ಬಿಜೆಪಿ ನಾಯಕರು ಟೀಕಿಸಿದ್ದಾರೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಕ್ಕೆ ಜನರು ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಹೋಗುವಾಗ ನಾಯಿ ಕೂಡ ಅವರನ್ನು ಮೂಸುತ್ತಿರಲಿಲ್ಲ. ಮುಖ್ಯಮಂತ್ರಿಯಾಗಿ ಸಮಸ್ಯೆ ಹೊತ್ತುಕೊಂಡು ಬಳಿ ಬಂದ ಜನರ ಮೇಲೆ ಹೀಗೆ ಸಿಟ್ಟಿಗೇಳುವ ಮುಖ್ಯಮಂತ್ರಿಯನ್ನು ರಸ್ತೆಯಲ್ಲಿ ಹೋಗುವ ದಾಸ ಎಂದು ಕರೆಯಲು ನಾನು ಇಚ್ಛೆಪಡುತ್ತೇನೆ ಎಂದರು ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com