ಬಿಎಸ್ ವೈ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಡಿ: ಸಂಸದ ಪ್ರತಾಪ್ ಸಿಂಹ

ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯರು ನಡೆಸಿದ ಏರ್ ಸ್ಟ್ರೈಕ್ ದಾಳಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
ಮೈಸೂರು: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯರು ನಡೆಸಿದ ಏರ್ ಸ್ಟ್ರೈಕ್ ದಾಳಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 22 ಕ್ಷೇತ್ರಗಳನ್ನು ಗೆಲ್ಲಲು ಸಹಾಯ ಮಾಡುತ್ತದೆ ಎಂಬ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪನವರಿಗೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಕೊಟ್ಟಿರುವ ಹೇಳಿಕೆಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. 2001, ಡಿಸೆಂಬರ್ 14ನೇ ತಾರೀಖು ಸಂಸತ್ತು ಮೇಲೆ ದಾಳಿಯಾದಾಗ ಪಾಕಿಸ್ತಾನದ ಗಡಿಯೊಳಗೆ ಹೋಗಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಬೇಕು ಎನ್ನುವ ಆಕ್ರೋಶ ದೇಶಾದ್ಯಂತ ವ್ಯಕ್ತವಾಗಿತ್ತು. ಆರ್ಯ ಭಾರತ್ ಎನ್ನುವ ಸೇನೆಯನ್ನು ಗಡಿಯಲ್ಲಿ ನಿಯೋಜನೆ ಮಾಡಿ ಯುದ್ಧಕ್ಕೂ ಸನ್ನದ್ಧವಾಗಿತ್ತು. ಆದರೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿಯವರು ಗಡಿಯನ್ನು ದಾಟಿ ಹೋಗಲು ಅನುಮತಿ ನೀಡಿರಲಿಲ್ಲ ಎಂದು ಪ್ರತಾಪ್ ಸಿಂಹ ನೆನಪು ಮಾಡಿಕೊಂಡರು.
ಪಾಕಿಸ್ತಾನದ ಜೊತೆ ಶಾಂತಿ ಮಾತುಕತೆಗೆ ಕಡೆಯ ಅವಕಾಶವನ್ನು ಕೊಡಬೇಕು ಎಂದು ಹೇಳಿ ಗಡಿ ದಾಟಿರಲಿಲ್ಲ. 2008ರಲ್ಲಿ ಮುಂಬೈ ನಗರಿ ಮೇಲೆ ಉಗ್ರರ ದಾಳಿಯಾಗಿ 180ಕ್ಕೂ ಹೆಚ್ಚು ಜನ ನಾಗರಿಕರು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಇನ್ನು ಶಾಂತಿ ಮಾತುಕತೆ ಸಾಕು, ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ದೇಶಾದ್ಯಂತ ಮತ್ತೆ ಆಕ್ರೋಶ ವ್ಯಕ್ತವಾಗಿತ್ತು. ಆಗ ಪ್ರಧಾನ ಮಂತ್ರಿಯಾಗಿದ್ದ ಡಾ ಮನಮೋಹನ್ ಸಿಂಗ್ ಅವರು ಭಾರತೀಯ ಸೇನೆಗೆ ಗಡಿ ದಾಟಲು ಅನುಮತಿ ಕೊಟ್ಟು ಪಾಕಿಸ್ತಾನಕ್ಕೆ ಬುದ್ದಿ ಕಲಿಸಬಹುದಾಗಿತ್ತು. ಆಗ ಮನಮೋಹನ್ ಸಿಂಗ್ ಅವರು ಅಂತಹ ಧೈರ್ಯವನ್ನು ತೋರಲಿಲ್ಲ ಎಂದು ಟೀಕಿಸಿದರು.
ಕಳೆದ ತಿಂಗಳು ಪುಲ್ವಾಮಾ ದಾಳಿಯಾದ ನಂತರ ಮತ್ತೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಪ್ರಧಾನಿ ಮೋದಿಯವರು ಪಾಕಿಸ್ತಾನದ ನೆಲೆಗೆ ಹೋಗಿ ಉಗ್ರವಾದಿಗಳ ತಾಣಗಳನ್ನು ಧ್ವಂಸ ಮಾಡಿ ಎಂದು ಹೇಳಿ ವಾಯುಸೇನೆಗೆ ಅನುಮತಿ ನೀಡಿ ಸೇನೆ ಹೋಗಿ ಬಾಲಕೋಟ್ ನಲ್ಲಿ ಸುಮಾರು 300 ಉಗ್ರರು ಹತವಾಗಿದ್ದು ನಮಗೆ ಗೊತ್ತಿದೆ. 1971ರ ನಂತರ ನಮ್ಮ ದೇಶದಲ್ಲಿ ಇದುವರೆಗೆ ಭಾರತದ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗುವುದಕ್ಕೆ ಅವಕಾಶ ನೀಡುವ ಧೈರ್ಯವನ್ನು ಯಾರೂ ಕೂಡ ತೋರಿರಲಿಲ್ಲ. ಅಂತಹ ಧೈರ್ಯವನ್ನು ಗಟ್ಟಿ ನಾಯಕತ್ವವನ್ನು ಹೊಂದಿರುವ ಮೋದಿಯವರು ತೋರಿದ್ದಾರೆ. ಇಂತಹ ಸಂದರ್ಭದಲ್ಲಿ ತಮಗೆ ಸಮರ್ಥ ನಾಯಕ ಸಿಕ್ಕಿದ್ದಕ್ಕೆ ದೇಶದ ಜನರು ಮೋದಿಯವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com