38 ಸ್ಥಾನ ಗಳಿಸಿದಾಗ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ: ಎಚ್.ಡಿ. ಕುಮಾರಸ್ವಾಮಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 38 ಸ್ಥಾನ ಗಳಿಸಿದಾಗ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಕಾಂಗ್ರೆಸ್‍ ನಾಯಕರು...

Published: 04th March 2019 12:00 PM  |   Last Updated: 04th March 2019 02:43 AM   |  A+A-


CM HDKumaraswamy

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

Posted By : ABN ABN
Source : UNI
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 38 ಸ್ಥಾನ ಗಳಿಸಿದಾಗ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಕಾಂಗ್ರೆಸ್‍ ನಾಯಕರು ಕರೆ ಮಾಡಿ ಮೈತ್ರಿ ಸರ್ಕಾರದ ಪ್ರಸ್ತಾವನೆ ಮುಂದಿಟ್ಟರು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‍ ಹಾಲ್‍ ನಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಕುರಿತ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ಪರಿಣಿತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲು. ಹನ್ನೆರಡು ವರ್ಷಗಳ ಹಿಂದೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ನನಗಿದ್ದುದು ಮಾಜಿ ಪ್ರಧಾನಿ ದೇವೇಗೌಡರ ಮಗ ಎಂಬ ಅರ್ಹತೆ ಮಾತ್ರ. ಯಾರೋ ಹುಡುಗ ಸರ್ಕಾರ ರಚನೆ ಮಾಡಿದ್ದಾನೆ ಎಂದು ಜನ ಅನುಮಾನದಿಂದಲೇ ನೋಡಿದ್ರು. ಆಗಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದರು.

ನಾನು ಯಾವಾಗಲೂ ಕಾಯಕಕ್ಕೆ ಮಹತ್ವ ನೀಡುವವನು. ಭವಿಷ್ಯ,ಜ್ಯೋತಿಷ್ಯದ ಹಿಂದೆ ಹೋಗುವವನಲ್ಲ. ಆದರೆ ನಮ್ಮ ಕುಟುಂಬ ವರ್ಗದವರು ನಂಬುತ್ತಾರೆ. ನಮ್ಮ ತಂದೆ  ಗ್ರಾಮೀಣಭಾಗದಿಂದ ಬಂದವರು. ಅವರು ಮೈಸೂರು ಅರಸರ ಜ್ಯೋತಿಷಿ ಒಬ್ಬರನ್ನು ನಂಬುತ್ತಾರೆ. ನಾನು ದೇವರನ್ನು ನಂಬುತ್ತೇನೆ. 38-78 ಸಂಖ್ಯಾಶಾಸ್ತ್ರವನ್ನು ನಂಬಲ್ಲ.  ಆದರೆ ಪ್ರತಿಬಾರಿಯೂ ಗಡುವಿನಲ್ಲೇ ಸರ್ಕಾರ ನಡೆಸುವ ಪರಿಸ್ಥಿತಿ ಇದೆ. ಆದರೂ ನಮ್ಮಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಸಿಗುತ್ತಿಲ್ಲ ಎಂಬ ಬೇಸರವಿದೆ ಎಂದರು.

ಹನ್ನೆರಡು ವರ್ಷಗಳ ಹಿಂದೆ ವ್ಯವಸ್ಥಿತವಾಗಿ ಜನತಾದರ್ಶನ ಆರಂಭಿಸಿದ್ದೆ. ಆದರೆ ಈಗ ಪ್ರತಿನಿತ್ಯ ಜನತಾದರ್ಶನ ಮಾಡಲು ಆಗುತ್ತಿಲ್ಲ. ಆದರೆ ಈಗಲೂ ಜನ ಬರುತ್ತಾರೆ. ಮಾನವೀಯತೆ ದೃಷ್ಟಿಯಿಂದ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವರುಗಳು ಕೇವಲ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ.ಇದರ ಬಗ್ಗೆ ಬೇಸರವಿದೆ. ಹಿಂದೆ ಅಬಕಾರಿ, ಶಿಕ್ಷಣದ ಕ್ಷೇತ್ರಗಳ ಲಾಬಿಯಂತೆ ಈಗ ಭೂ ಡೆವಲಪರ್ಸ್ ಗಳ ಲಾಭಿ ಹೆಚ್ಚಾಗಿದೆ. ಹಣ ಚೆಲ್ಲಿ ಗೆದ್ದು ಬರುವವರಿಂದ ನಾವು ಜನ ಸೇವೆ ನಿರೀಕ್ಷಿಸಲು ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಿಂಗಾಯಿತರಿಗೆ ಅನ್ಯಾಯ ಮಾಡಿಲ್ಲ
ಯಡಿಯೂರಪ್ಪ ವೀರಶೈವ ಲಿಂಗಾಯಿತ ಅಧಿಕಾರಿಗಳಿಗೆ ನನ್ನಿಂದ ಪಕ್ಷಪಾತವಾಗುತ್ತಿದೆ ಎಂದು ಆರೋಪಿಸಿದ್ದಾರೆ.ಇದು ನೋವು ತಂದಿದೆ. ನಾನು ಎಂದೂ ಜಾತಿ ರಾಜಕಾರಣ ಮಾಡುವವನಲ್ಲ. ಜಾತಿ ಕಾರಣಕ್ಕೆ ಯಾವುದೇ ಅಧಿಕಾರಿಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ತಂದರೆ ತಕ್ಷಣ ಸರಿಪಡಿಸುವುದಾಗಿ ಪ್ರತಿಪಕ್ಷ ನಾಯಕರಿಗೂ ಈ ಮೂಲಕ ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಈ ಬಾರಿ ಚರ್ಚೆಯೇ ಆಗದೆ ಬಜೆಟ್ ಅನುಮೋದನೆಯಾಗಿದ್ದು ನನ್ನ ದುರಾದೃಷ್ಟ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಹೆಚ್ಚಿನ ಮಹತ್ವವಿದೆ. ಜನಪ್ರತಿನಿಧಿಗಳು ತಮ್ಮ ಮುಂದಿನ ಚುನಾವಣೆ ಗೆಲ್ಲುವುದು ಹೇಗೆ ಎಂದು ಚಿಂತಿಸುತ್ತಿರುತ್ತಾರೆ ಹೊರತು ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆಯೇ ಎಂಬುದನ್ನು ಗಮನಿಸುವ ಆಸಕ್ತಿಯೇ ಇಲ್ಲ

ನಮ್ಮ ತಂದೆಯೇ ನನಗೆ ಗುರು,ಮಾರ್ಗದರ್ಶಿ. ಆದರೆ, ಪ್ರತಿದಿನ ನನ್ನ ಭೇಟಿಗೆ ಬರುವ ಸಾರ್ವಜನಿಕರು ನನಗೆ ಆದರ್ಶ. ಆ ಬಡ ಜನತೆಯನ್ನು ಆರ್ಥಿಕವಾಗಿ ಮೇಲೆತ್ತಲು ಏನು ಮಾಡಬೇಕು ಎಂಬುದರ ಬಗ್ಗೆ ಸದಾ ಚಿಂತಿಸುವಂತೆ ಅವರು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
Stay up to date on all the latest ರಾಜಕೀಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp