ಯಡಿಯೂರಪ್ಪ-ಅಶೋಕ್ ಸಭೆ: ಸುಮಲತಾ ಬೆಂಬಲಿಸಲು ಚಿಂತನೆ? ರಾಮನಗರದಿಂದ ಯೋಗೇಶ್ವರ್ ಕಣಕ್ಕೆ?

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಪಾಳಯದಲ್ಲಿ ಕಸರತ್ತು ಜೋರಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ...
ಯಡಿಯೂರಪ್ಪ ಮತ್ತು ಆರ್. ಅಶೋಕ
ಯಡಿಯೂರಪ್ಪ ಮತ್ತು ಆರ್. ಅಶೋಕ
ಬೆಂಗಳೂರು; ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಪಾಳಯದಲ್ಲಿ ಕಸರತ್ತು ಜೋರಾಗಿದೆ. ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸ ಇಂದು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು,
ಯಡಿಯೂರಪ್ಪ ನೇತೃತ್ವದಲ್ಲಿ  ಆರ್.ಅಶೋಕ್ ಹಾಸನ, ಮಂಡ್ಯ, ದಾವಣಗೆರೆ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸಿದರು. 
ಸಭೆಯಲ್ಲಿ ಮಾಜಿ ಸಚಿವ ಎ.ಮಂಜು ಬಿಜೆಪಿ ಸೇರುವ ಬಗ್ಗೆ ಚರ್ಚಿಸಲಾಯಿತು. ಹಾಸನದಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ವಿರುದ್ಧ ಸಿಡಿದೆದ್ದಿರುವ ಮಂಜು, ಚುನಾವಣೆಯಲ್ಲಿ ಜೆಡಿಎಸ್‍ ಪಕ್ಷಕ್ಕೆ ಬೆಂಬಲಿಸದಿರಲು ನಿರ್ಧರಿಸಿದ್ದು, ಕೆಲವು ದಿನಗಳ ಹಿಂದೆ ಬಿಜೆಪಿ ಸೇರುವ ಸೂಚನೆ ನೀಡಿದ್ದರು. ಅದರಂತೆ ಇಂದು ಯಡಿಯೂರಪ್ಪರನ್ನು ಭೇಟಿ ಮಾಡಿ ಸೇರ್ಪಡೆ ಕುರಿತು ಚರ್ಚೆ ನಡೆಸಿದರು. 
ದಾವಣಗೆರೆ ಜಿಲ್ಲೆಯಿಂದ ಮರು ಆಯ್ಕೆ ಬಯಸಿರುವ ಸಂಸದ ಜಿ.ಎಂ.ಸಿದ್ದೇಶ್ವರ್, ಕ್ಷೇತ್ರದ ಕುರಿತು ಸಭೆಯಲ್ಲಿ ಮಾಹಿತಿ ನೀಡಿದರು. ಅಲ್ಲದೇ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಅವರನ್ನು ಕಣಕ್ಕಿಳಿಸಲು ಆರ್.ಅಶೋಕ್ ಮುಂದಾಗಿದ್ದು, ತೇಜಸ್ವಿನಿ ಸ್ಪರ್ಧೆಯ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 
ಮಂಡ್ಯ ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳ ಕಿತ್ತಾಟದಿಂದ ಬಿಜೆಪಿಗೆ ಲಾಭವಾಗಲಿದ್ದು, ಸುಮಲತಾ ಅಂಬರೀಷ್ ಅವರ ಸ್ಪರ್ಧೆಯಿಂದ ಹಾಗೂ ಸುಮಲತಾಗೆ ಬೆಂಬಲ ನೀಡುವುದರಿಂದ ಪಕ್ಷಕ್ಕಾಗುವ ಲಾಭ ನಷ್ಟದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಲಾಯಿತು.
ಸಭೆ ಬಳಿಕ ಮಾತನಾಡಿದ ಆರ್.ಅಶೋಕ್,  ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಯಡಿಯೂರಪ್ಪ ತಮಗೆ ವಹಿಸಿದ್ದರಿಂದ ಪಕ್ಷವನ್ನು ಗಟ್ಟಿಗೊಳಿಸುವ ಬಗ್ಗೆ ತಾವು ಕಾರ್ಯಪ್ರವೃತ್ತರಾಗಿದ್ದು, ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಆಯ್ಕೆ, ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕುರಿತು ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.  
ರಾಜ್ಯದ ಜನ ದೇವೇಗೌಡ ಅವರ ಕುಟುಂಬ ರಾಜಕಾರಣದಿಂದ ಬೇಸತ್ತಿದ್ದಾರೆ. ಮಹಿಳೆಯ ಬಗ್ಗೆ ರೇವಣ್ಣ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದ್ದು, ಈ ಬಗ್ಗೆ ಸುಮಲತಾ ಅವರ ಜೊತೆ ಮಾತುಕತೆ ನಡೆಸಬೇಕಿದೆ. 
ನಾಳೆಯೂ ಸಹ ಮಂಡ್ಯ ಬಗ್ಗೆ ಯಡಿಯೂರಪ್ಪ ಅವರ ಜೊತೆ ಸಭೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ .ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com