ಶಿವಮೊಗ್ಗದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಹೊಣೆ ಡಿಕೆಶಿ ಹೆಗಲಿಗೆ

ಬಿಜೆಪಿಯ ಭದ್ರ ನೆಲೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು...
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
ಬೆಂಗಳೂರು: ಬಿಜೆಪಿಯ ಭದ್ರ ನೆಲೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು, ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಈ ಬಾರಿ ಬಿಜೆಪಿಯಿಂದ ಪುನರ್ ಆಯ್ಕೆ ಬಯಸಿದ್ದು, ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿದಿದ್ದಾರೆ. 
2018 ರ ನವೆಂಬರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಹಾಗೂ ಮಧು ಬಂಗಾರಪ್ಪ ಮುಖಾಮುಖಿಯಾಗಿದ್ದು, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡಿದ್ದ ಮಧುಬಂಗಾರಪ್ಪ 52,148 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ಕುರಿತು ಚರ್ಚೆ ನಡೆಸಿ, ಚುನಾವಣಾ ಜವಾಬ್ದಾರಿಯನ್ನು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಲು ತೀರ್ಮಾನಿಸಲಾಯಿತು.
ಮೊದಲಿನಿಂದಲೂ ಮಧು ಬಂಗಾರಪ್ಪ ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದು, ಕುಮಾರಸ್ವಾಮಿಯವರ ಸಲಹೆ ಮೇರೆಗೆ ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದಾರೆ.
ಕಳೆದ ಬಳ್ಳಾರಿ ಉಪ ಚುನಾವಣೆ ಹೊಣೆ ಹೊತ್ತಿದ್ದ ಡಿಕೆಶಿ ತಮ್ಮ ಕಾರ್ಯತಂತ್ರದ ಮೂಲಕ ಬಿಜೆಪಿ ಭದ್ರಕೋಟೆಯಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅವರ ಗೆಲುವಿಗೆ ಕಾರಣರಾಗಿದ್ದರು. ಈ ಯಶಸ್ಸಿನ ಕಾರಣದಿಂದಲೇ ಅವರಿಗೆ ಶಿವಮೊಗ್ಗದ ಉಸ್ತುವಾರಿ  ನೀಡಲಾಗಿದೆ.
ಕ್ಷೇತ್ರದಲ್ಲಿ ಸುಮಾರು 2.70 ಲಕ್ಷ ಲಿಂಗಾಯತರು, 2.5 ಲಕ್ಷ  ದಲಿತರು, 2 ಲಕ್ಷ ಈಡಿಗರು, 1.5 ಲಕ್ಷ ಬ್ರಾಹ್ಮಣರು, 1.30 ಲಕ್ಷ ಮುಸ್ಲಿಂಮರು, 60  ಸಾವಿರ ಕುರುಬ ಮತಗಳಿವೆ. ಮಧು ಬಂಗಾರಪ್ಪ ಅವರಿಗೆ ಈಡಿಗರು ಬೆಂಬಲ ನೀಡಲಿದ್ದಾರೆ.  ಎಸ್.ಬಂಗಾರಪ್ಪ ಬಲ, ಕಾಂಗ್ರೆಸ್ ಬೆಂಬಲದಿಂದಾಗಿ ಅವರು ಗೆಲುವು ಸಾಧಿಸುವಂತೆ ಮಾಡುವುದು  ಕಾಂಗ್ರೆಸ್ ತಂತ್ರವಾಗಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ ಭದ್ರಾವತಿಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕ ಸಂಗಮೇಶ್ ಆಯ್ಕೆಯಾಗಿದ್ದಾರೆ. ಉಳಿದಂತೆ ಯಾವ ಕ್ಷೇತ್ರದಲ್ಲಿ ಜೆಡಿಎಸ್ ಖಾತೆ ತೆರೆದಿಲ್ಲ.  ಮಧು ಬಂಗಾರಪ್ಪ ಉಪಚುನಾವಣೆಯಲ್ಲಿ ಸೋತ ಬಳಿಕ ಒಂದೆರೆಡು ಬಾರಿ ಬಿಟ್ಟರೆ ಹೆಚ್ಚಾಗಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಪಕ್ಷ ಸಂಘಟನೆಯಲ್ಲಿ ಅಷ್ಟೊಂದು ಚುರುಕಾಗಿಲ್ಲ. ಅಲ್ಲದೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್  ಸ್ಥಳಿಯರಿಗೆ ಅಪರಿಚಿತ. ಸುಂದರೇಶ್ ಅವರನ್ನು ವಿರೋಧಿಸುವವರೇ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ. ಮಧು ಬಂಗಾರಪ್ಪ ಚುನಾವಣೆಗೆ ಸ್ಪರ್ಧಿಸಲು ಮನಸಿಲ್ಲ ಎಂಬ ಚರ್ಚೆ ಶಿವಮೊಗ್ಗದಲ್ಲಿ ಸದ್ದು ಮಾಡುತ್ತಿದೆ. 
ಸ್ಥಳಿಯ ಮಟ್ಟದಲ್ಲಿ ಮಧು ಬಂಗಾರಪ್ಪ ಪರ ಪ್ರಚಾರ ಮಾಡಲು ನಾಯಕರು ಮುಂದಾಗುತ್ತಿಲ್ಲ. ಮಧುಬಂಗಾರಪ್ಪ ಇನ್ನೂ ಅಖಾಡಕ್ಕೆ ಧುಮುಕಿಲ್ಲ. ಇಂತಹ ರಾಜಕೀಯ ಸನ್ನಿವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಗಳು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಯಾವ ರೀತಿ ಪರಿಣಾಮಕಾರಿಯಾಗಲಿವೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com