ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬೆನ್ನಲ್ಲೆ ಅಸಮಾಧಾನ ಸ್ಪೋಟ, ಬಿಜೆಪಿ ತೊರೆದ 3 ಪ್ರಮುಖರು!

ಬಿಜೆಪಿಯ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ, ಬಾಬು ರಾವ್ ಚವ್ಹಾಣ್ ಹಾಗೂ ಕಲಬುರಗಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮಾರಾವ್ ಪ್ಯಾಟಿ ಬಿಜೆಪಿ ತೊರೆದಿದ್ದಾರೆ.
ಉಮೇಶ್ ಜಾದವ್, ಬಿಜೆಪಿ ಮುಖಂಡರು
ಉಮೇಶ್ ಜಾದವ್, ಬಿಜೆಪಿ ಮುಖಂಡರು
ಬೆಂಗಳೂರು: ಡಾ.ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ಬಳಿಕ ಕಲಬುರಗಿ ಜಿಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಬಿಜೆಪಿಯ ಹಿರಿಯ ಮುಖಂಡ ಕೆ.ಬಿ.ಶಾಣಪ್ಪ, ಬಾಬು ರಾವ್ ಚವ್ಹಾಣ್ ಹಾಗೂ ಕಲಬುರಗಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮಾರಾವ್ ಪ್ಯಾಟಿ ಬಿಜೆಪಿ ತೊರೆದಿದ್ದಾರೆ.
ಈ ಮೂವರು ನಾಯಕರು ಉಮೇಶ್ ಜಾಧವ್ ಅವರಿಗೆ ಬಿಜೆಪಿ ಟಿಕೆಟ್ ನೀಡುವುದನ್ನು ವಿರೋಧಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ಯಾಮರಾವ್ ಪ್ಯಾಟಿ, ಕಳೆದ ಎಂಟು ದಿನಗಳಿಂದ ತಾವು ಚುನಾವಣಾ ತಯಾರಿ ಸಭೆಗಳನ್ನು ಮಾಡಿದ್ದೇವೆ. ಜಿಲ್ಲೆಯಲ್ಲಿ ಸ್ಥಳೀಯ ನಾಯಕರೊಂದಿಗೆ ಚರ್ಚಿಸದೆ ಏಕಾಏಕಿ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಉಮೇಶ್ ಜಾಧವ್ ಕಲಬುರಗಿಯ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಚುನಾವಣಾ ರೂಪುರೇಷಗಳ ಬಗ್ಗೆಯೂ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಸಹಜವಾಗಿಯೇ ಈ ಎಲ್ಲ ಬೆಳವಣಿಗೆಗಳಿಂದ ಮನಸ್ಸಿಗೆ ಬೇಸರವಾಗಿದ್ದು ಪಕ್ಷವನ್ನು ತೊರೆಯುತ್ತಿದ್ದೇವೆ ಎಂದು ಘೋಷಿಸಿದರು.
ಕೆ.ಬಿ.ಶಾಣಪ್ಪ ಮಾತನಾಡಿ, ಬಿಜೆಪಿ ತೊರೆಯಲು ತೀರ್ಮಾನಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಬೆಂಬಲಿಗರು, ಕಾರ್ಯಕರ್ತರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇನೆ. ತಾವು ಸಕ್ರೀಯ ರಾಜಕಾರಣಿಯಾಗಿದ್ದು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ. ಮತ್ತೊಂದು ಪಕ್ಷದಿಂದ ವ್ಯಕ್ತಿಯನ್ನು ತಂದು ಚುನಾವಣೆಗೆ ನಿಲ್ಲಿಸಿ ಬೆಂಬಲ ನೀಡಬೇಕು ಎಂದರೆ ಅದು ಸಾಧ್ಯವಾಗದ ಮಾತು. ಸಮರ್ಥ ಅಭ್ಯರ್ಥಿಯಾಗಿದ್ದರೆ ಪಕ್ಷಕ್ಕೆ ಬರಮಾಡಿಕೊಳ್ಳುವ ಮುನ್ನ ಜಿಲ್ಲೆಯ ಮುಖಂಡರೊಂದಿಗೆ ಚರ್ಚಿಸಬೇಕಿತ್ತು. ಏಕಾಏಕಿ ಉಮೇಶ್ ಜಾಧವ್ ಅಭ್ಯರ್ಥಿ ಎಂದು ಘೋಷಿಸಿರುವುದು ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರ ಮನೆಗಳಲ್ಲಿ ವಾಸ್ತವ್ಯ ಹಾಗೂ ಊಟ ಮಾಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರು ಹೇಳಿದ್ದರು. ಅಂದೇ ತಮಗೆ ಬಿಜೆಪಿ ಬಗ್ಗೆ ಅಸಮಾಧಾನ ಉಂಟಾಗಿತ್ತು. ದಲಿತರ ಮನೆಯಲ್ಲಿ ಊಟ ಮಾಡಿ,ವಾಸ್ತವ್ಯ ಹೂಡಿದ ಮಾತ್ರಕ್ಕೆ ಜಾತಿ ನಿರ್ಮೂಲನೆ ಆಗಲ್ಲ ಎಂದು ಬಿಜೆಪಿ ವಿರುದ್ಧ ಕೆ.ಬಿ.ಶಾಣಪ್ಪ ಕಿಡಿಕಾರಿದರು.
ಮಾರ್ಚ್  18 ರಂದು ಕಲಬುರಗಿಯಲ್ಲಿ ನಡೆಯುವ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೆ.ಬಿ.ಶಾಣಪ್ಪ, ಬಾಬುರಾವ್ ಚವ್ಹಾಣ್ ,ಶಾಮರಾವ್ ಪ್ಯಾಟಿ ಮೂವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com