ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಲು ಸಾಧ್ಯವಿಲ್ಲ: ಮಾಜಿ ಸಚಿವ ಎ ಮಂಜು

ಕಾಂಗ್ರೆಸ್ -ಜೆಡಿಎಸ್ ಸಾಂಪ್ರದಾಯಿಕವಾಗಿ ದ್ವೇಷ ರಾಜಕಾರಣ ಮಾಡುತ್ತಾ ಬಂದಿವೆ. ಅವರೆಡರೂ ...
ಎ ಮಂಜು(ಸಂಗ್ರಹ ಚಿತ್ರ)
ಎ ಮಂಜು(ಸಂಗ್ರಹ ಚಿತ್ರ)
ಹಾಸನ: ಕಾಂಗ್ರೆಸ್ -ಜೆಡಿಎಸ್ ಸಾಂಪ್ರದಾಯಿಕವಾಗಿ ದ್ವೇಷ ರಾಜಕಾರಣ ಮಾಡುತ್ತಾ ಬಂದಿವೆ. ಅವರೆಡರೂ ಯಾವತ್ತಿಗೂ ಎಣ್ಣೆ-ಸೀಗೇಕಾಯಿ ಇದ್ದಂತೆ, ಒಂದಾಗಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಬಿಜೆಪಿಗೆ ಸೇರಿರುವ ಎ ಮಂಜು ಹೇಳಿದ್ದಾರೆ.
ಹಾಸನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಧರ್ಮ ಹೆಸರಿನಲ್ಲಿ ಕಾಂಗ್ರೆಸ್ -ಜೆಡಿಎಸ್ ನಾಯಕರು ಒಂದಾಗಬಹುದು. ಆದರೆ ಕಾರ್ಯಕರ್ತರು ಯಾವತ್ತಿಗೂ ಒಟ್ಟಾಗಲು ಸಾಧ್ಯವಿಲ್ಲ. ಕಾರ್ಯಕರ್ತರ ಒಳಿತಿಗೆ ಬೇಕಾಗುವಂತಹ ಯಾವುದೇ ಕೆಲಸ ಕಾರ್ಯ ಮಾಡಿಕೊಟ್ಟಿಲ್ಲ ಎಂದು ಹೇಳಿದರು.
ಮೈತ್ರಿ ಇರುವುದಾದರೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಕಿರುವ ಹಲವು ಕೇಸುಗಳನ್ನು ವಾಪಸ್ ತೆಗೆದುಕೊಳ್ಳಲಿ, ಸಮ್ಮಿಶ್ರ ಸರ್ಕಾರದಲ್ಲಿ ಪಂಚಾಯತಿಯನ್ನು ಇಳಿಸುವ ಕೆಲಸ ಏಕೆ ಮಾಡಬೇಕು. ಹಾಸನಲ್ಲಿಯೇ ಕಳೆದ 20-25 ವರ್ಷಗಳಿಂದ ಕಾಂಗ್ರೆಸ್-ಜೆಡಿಎಸ್ ನಲ್ಲಿ ದ್ವೇಷದ ರಾಜಕಾರಣ ನೋಡುತ್ತಿದ್ದೇವೆ ಎಂದರು.
ನಾನು ಕಾಂಗ್ರೆಸ್ ತೊರೆಯುವ ಮುನ್ನ  ಪಕ್ಷಗಳ ಮುಖಂಡರ ಜೊತೆ ಚರ್ಚಿಸಿ ತಾಲ್ಲೂಕುಗಳಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ಮಾಡಿ ಆ ಮೇಲೆ ನಿರ್ಧಾರಕ್ಕೆ ಬಂದಿರುವುದು. ನಾನು ಮಂತ್ರಿಯಾಗಿದ್ದಾಗ ದಳ, ಕೈ ಕಾರ್ಯಕರ್ತರೆಂದು ಬೇಧ ಮಾಡಲಿಲ್ಲ, ನಮ್ಮ ಜಿಲ್ಲೆಯೆಂದು ಹೇಳಿ ಅಭಿವೃದ್ಧಿಪಡಿಸಿದ್ದೀನೆ ಎಂದರು.
ಇದೇ ಸಂದರ್ಭದಲ್ಲಿ ದೇವೇಗೌಡರ ಕುಟುಂಬದವರ ಮೇಲೆ ಹರಿಹಾಯ್ದ ಅವರು, ಕುಟುಂಬದಲ್ಲಿ ಮಕ್ಕಳು, ಮೊಮ್ಮಕ್ಕಳು ರಾಜಕಾರಣಕ್ಕೆ ಬರಬಾರದೆಂದಲ್ಲ. ಅದಕ್ಕೊಂದು ವೇದಿಕೆ ಇರಬೇಕು, ಹಂತ ಹಂತವಾಗಿ ಬೆಳೆಯಬೇಕು, ನಾನು ಪ್ರಧಾನಿಯಾಗಬೇಕೆಂದು ಬಯಸುವುದು ಮೂರ್ಖತನವಲ್ಲವೇ ಹಂತಹಂತವಾಗಿ ಅಧಿಕಾರದಲ್ಲಿ ಮೇಲೇರಿದರೆ ಮಾತ್ರ ಅದಕ್ಕೊಂದು ಘನತೆ, ಗೌರವ ಇರುತ್ತದೆ ಎಂದು ಹೇಳಿದರು.
ದೇಶ ಸೇವೆ ಮಾಡಲು ರಾಜಕೀಯಕ್ಕೆ ಬರುವುದಾಗಿ ದೇವೇಗೌಡರ ಮೊಮ್ಮಕ್ಕಳು ಹೇಳುತ್ತಾರೆ, ಅವರ ಕುಟುಂಬದಲ್ಲಿ ಈಗಾಗಲೇ ಬಹುತೇಕರು ಅಧಿಕಾರದಲ್ಲಿದ್ದಾರೆ. ತಾತ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರ ಬಳಿಯೂ ಅಧಿಕಾರದಲ್ಲಿರುವಾಗ ಸಮಾಜಸೇವೆ ಮಾಡಲು ಇನ್ನೇನು ಬೇಕಾಕಿದೆ, ಅಧಿಕಾರಕ್ಕೆ ಬಂದು ಜನಸೇವೆ ಮಾಡುತ್ತೇವೆ ಎನ್ನುವುದು ಜನರನ್ನು ಮೂರ್ಖ ಮಾಡುವ ಕುತಂತ್ರವೇ ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com