ಮಾ. 25ರಂದು ಮಂಡ್ಯದಿಂದ ನಿಖಿಲ್ ನಾಮಪತ್ರ ಸಲ್ಲಿಕೆ: ಸಿಎಂ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ನಾಮಪತ್ರ ಸಲ್ಲಿಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವುಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ನಾಮಪತ್ರ ಸಲ್ಲಿಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವುಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಇಂದು ಪುತ್ರ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.
ಜ್ಯೋತಿಷಿಗಳ ಸಲಹೆ ಮೇರೆಗೆ ಗುರುವಾರ ನಿಖಿಲ್, ಒಂದು ಜೊತೆ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದರು. ಮತ್ತೆ 25 ರಂದು ಮತ್ತೊಂದು ಬಾರಿ ಉಮೇದುವಾರಿಕೆ ಸಲ್ಲಿಸಲು ಮುಂದಾಗಿದ್ದರು. ಇದು ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಬಹುದೆಂಬ ಕಾರಣಕ್ಕಾಗಿ ಇಂದು ಅವರು ನಾಮಪತ್ರ ಸಲ್ಲಿಸಿಲ್ಲ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಎರಡು ಬಾರಿ ನಾಮಪತ್ರ ಸಲ್ಲಿಸುವುದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು. ಹೀಗಾಗಿ ಮಾರ್ಚ್ 25 ರಂದು ಒಂದೇ ಬಾರಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದರು.
ಸುಮಲತಾ ಅವರಿಗೆ ಕಾಂಗ್ರೆಸ್‍ ನ ಕೆಲ ನಾಯಕರು ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಕಿಡಿಕಾರಿದ ಕುಮಾರಸ್ವಾಮಿ, ಮಂಡ್ಯದಲ್ಲಿ ಕೆಲ ಕಾಂಗ್ರೆಸಿಗರು ಬಹಳ ಮುಂದೆ ಹೋಗಿದ್ದಾರೆ. ಸ್ವಾಭಿಮಾನ ಕಳೆದುಕೊಂಡು ಅವರ ಮುಂದೆ ಹೋಗಿ ಪುತ್ರನನ್ನು ಬೆಂಬಲಿಸಿ ಎಂದು ತಾವು ಭಿಕ್ಷೆ ಬೇಡುವುದಿಲ್ಲ. ಮೂಲ ಕಾಂಗ್ರೆಸಿಗರು ಆಶೀರ್ವಾದ ಮಾಡಿ, ನಿಖಿಲ್ ಬೆಂಬಲಕ್ಕೆ ನಿಂತಿದ್ದಾರೆ. ತಮಗೆ ಸಮರ್ಥರಾಗಿರುವ ಜೆಡಿಎಸ್ ಕಾರ್ಯಕರ್ತರಷ್ಟೇ ಅಗತ್ಯವಾಗಿದ್ದು. ಬೆನ್ನಿಗೆ ಚೂರಿ ಹಾಕುವವರು ಅಗತ್ಯವಿಲ್ಲ ಎಂದರು.
ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ, ಜಿಲ್ಲೆಯ ಮೂಲ ಕಾಂಗ್ರೆಸಿಗರಾಗಿರುವ  ಜಿ.ಮಾದೇವೇಗೌಡ,  ಕೆ.ಆರ್.ಪೇಟೆ ಕೃಷ್ಣ ಸೇರಿದಂತೆ ಹಲವರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಹಲವು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ.
ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ನಾಯಕರು ತೀವ್ರ ವಿರೋಧ  ವ್ಯಕ್ತಪಡಿಸಿ, ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಮಲತಾ  ಬುಧವಾರ ಬೃಹತ್ ಮೆರವಣಿಗೆ, ಸಮಾವೇಶ ನಡೆಸುವ ಮೂಲಕ ಜೆಡಿಎಸ್ ನಾಯಕರ ವಿರುದ್ಧ ಶಕ್ತಿ  ಪ್ರದರ್ಶನ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com