ನಾನು ಟ್ರಬಲ್ ಶೂಟರ್ ಅಲ್ಲ, ಆದ್ರೂ ಮಂಡ್ಯ ಪರಿಸ್ಥಿತಿ ಬದಲಾಗಲಿದೆ: ಡಿಕೆಶಿ ವಿಶ್ವಾಸ

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ.....
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಾಬರಿಗೊಂಡಿಲ್ಲ. ಪ್ರಸ್ತುತ ಮಂಡ್ಯದ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಬದಲಾವಣೆ ಆಗೇ ಆಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂದು ಸದಾಶಿವ ನಗರದ ತಮ್ಮ ನಿವಾಸದಲ್ಲಿ ನಡೆದ ಮಂಡ್ಯ ಜಿಲ್ಲಾ ಮುಖಂಡರ ಜೊತೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಟ್ರಬಲ್ ಶೂಟರ್ ಅಲ್ಲ, ಇಲ್ಲಿ ಟ್ರಬಲ್ಲೂ ಇಲ್ಲ ಶೂಟು ಇಲ್ಲ, ನಾವು ಮನಸ್ಸು ಕೊಟ್ಟು ಕೆಲಸ ಮಾಡುವವರು. ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಸಾಕಷ್ಟು ಜನ ಸೇರಿದ್ದರು ಎಂಬ ಕಾರಣಕ್ಕೆ ಮುಖ್ಯಮಂತ್ರಿ  ಅವರು ಒತ್ತಡಕ್ಕೆ ಒಳಗಾಗಿಲ್ಲ.ಕಷ್ಟದ ಪರಿಸ್ಥಿತಿ ಎದುರಿಸಿ ರಾಜಕೀಯ ಮಾಡಿದ್ದಾರೆ. ತಮ್ಮ ಹೆಂಡತಿಯನ್ನೂ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಅವರಿಗೆ ರಾಜಕೀಯದ ಒಳಸುಳಿಗಳು ತಿಳಿದಿವೆ ಎಂದರು.
ಕ್ಷೇತ್ರ ಕೈತಪ್ಪಿದ ಕಾರಣ ಮಂಡ್ಯದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಬೇಸರವಿದೆ. ಅದೆಲ್ಲವನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಬದಲಾವಣೆ ಆಗೇ ಆಗುತ್ತದೆ. ತಮಗೆ ಮಂಡ್ಯದ ಜವಾಬ್ದಾರಿಯನ್ನು ಹೈಕಮಾಂಡ್ ನೀಡಿದೆ. ಆ ಕೆಲಸವನ್ನು ನಿರ್ವಹಿಸುತ್ತೇನೆ. ಪರಿಸ್ಥಿತಿ ತಿಳಿಗೊಳಿಸಲು ಎಲ್ಲಾ ನಾಯಕರನ್ನು ಕರೆದು ಮಾತನಾಡಿಸುತ್ತೇನೆ ಎಂದು ಶಿವಕುಮಾರ್ ತಿಳಿಸಿದರು. 
ಮಂಡ್ಯದಲ್ಲಿ ಸುಮಲತಾ ಗೆ ಕಾಂಗ್ರೆಸ್ ನಾಯಕರು ಪರೋಕ್ಷ ಬೆಂಬಲ ನೀಡಿದ ವಿಚಾರ ಸಂಬಂಧ ನಿನ್ನೆ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಭೆ ಆಯೋಜಿಸಲಾಗಿತ್ತು. ನಿನ್ನೆಯ ಸಭೆಗೆ ಪ್ರಮುಖ ನಾಯಕರಾದ ಚೆಲುವರಾಯಸ್ವಾಮಿ, ರವಿ ಗಾಣಿಗ, ನರೇಂದ್ರ ಸ್ವಾಮಿ ಗೈರು ಹಾಜರಾಗಿದ್ದರು.
ಡಿ.ಕೆ.ಶಿವಕುಮಾರ್ ನೇತೃತ್ವದ ಮಂಡ್ಯ ಜಿಲ್ಲಾ ಮುಖಂಡರ ಸಭೆಗೆ ಬಹುತೇಕ ನಾಯಕರು ಗೈರಾಗಿದ್ದರು. ಹಾಜರಿದ್ದ ಕೆಲವೇ ಕೆಲವು ಮುಖಂಡರ ಜೊತೆ ಸಭೆ ನಡೆಸಿದ್ದರು. ಸಭೆಯ ಕೊನೆಯ ಘಟ್ಟದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯೂ ಆಗಮಿಸಿ ನಿಖಿಲ್ ಪರ, ಸುಮಲತಾ ವಿರುದ್ದ ನಿಲ್ಲುವಂತೆ ಜಿಲ್ಲಾ ನಾಯಕರಿಗೆ ಜಂಟಿಯಾಗಿ ಸ್ಪಷ್ಟ ಸಂದೇಶ ರವಾನಿಸಿದರು ಎನ್ನಲಾಗಿದೆ.
ಬಳಿಕ ಮಂಡ್ಯ ಜಿಲ್ಲಾ ಬೆಳವಣಿಗೆ ಕುರಿತಂತೆ ಮಾಜಿ ಪ್ರಧಾನಿ ದೇವೇಗೌಡರ ಜೊತೆಯಲ್ಲಿಯೂ ಕುಮಾರಸ್ವಾಮಿ ತಡರಾತ್ರಿ, ಹಾಗೂ ಇಂದು ಬೆಳಗ್ಗೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಕಾಂಗ್ರೆಸ್ ನಾಯಕರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಹಿನ್ನಲೆಯಲ್ಲಿ ಇಂದು ನಿಖಿಲ್ ನಾಮಪತ್ರ ಸಲ್ಲಿಕೆಯನ್ನು ದಿಡೀರ್ ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com