ಬಿಎಂಟಿಸಿಯನ್ನು ಹರಾಜಿಗೆ ಇಟ್ಟವರೇ ಆರ್.ಅಶೋಕ್ - ಕುಮಾರಸ್ವಾಮಿ ಆರೋಪ

ಬಿಜೆಪಿಯದ್ದು ಲೂಟಿ ಹೊಡೆಯುವ ಸಂಸ್ಕೃತಿಯಾಗಿದ್ದು, ಶಾಸಕ, ಬಿಜೆಪಿ ಮುಖಂಡ ಆರ್.ಅಶೋಕ್ ಬಿಎಂಟಿಸಿಯನ್ನೇ ಹರಾಜು ಹಾಕಿ ಬಂದವರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಜೆಪಿಯದ್ದು ಲೂಟಿ ಹೊಡೆಯುವ ಸಂಸ್ಕೃತಿಯಾಗಿದ್ದು, ಶಾಸಕ, ಬಿಜೆಪಿ ಮುಖಂಡ ಆರ್.ಅಶೋಕ್ ಬಿಎಂಟಿಸಿಯನ್ನೇ ಹರಾಜು ಹಾಕಿ ಬಂದವರು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಗುತ್ತಿಗೆದಾರರ ಮೇಲೆ ಐಟಿ ದಾಳಿಯಾದರೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಆಗುವ ತೊಂದರೆಯಾದರೂ ಏನು ಎಂದು ಪ್ರಶ್ನಿಸಿದ್ದ ಆರ್. ಅಶೋಕ್ ಗೆ  ತಿರುಗೇಟು ನೀಡಿದ ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ಆರ್.ಅಶೋಕ್ ಏನೇನು ಮಾಡಿದ್ದಾರೆ, ಎಲ್ಲೆಲ್ಲಿ ಲೂಟಿ ಹೊಡೆದಿದ್ದಾರೆ ಎನ್ನುವುದು ತಮಗೆ ಚೆನ್ನಾಗಿ ಗೊತ್ತಿದೆ. ಬಿಎಂಟಿಸಿಯನ್ನು ಹರಾಜು ಹಾಕಿದ್ದ ಅಶೋಕ್ ಸಾಲ ಮಾಡಿ ಠೇವಣಿ ಹಣವನ್ನು ಲೂಟಿಗೈದಿದ್ದಾರೆ. ಬಿಜೆಪಿ ಅಧಿಕಾರದ ವೇಳೆ ಬಿಎಂಟಿಸಿಯಲ್ಲಿ ಭಾರಿ ಅಕ್ರಮ ನಡೆದಿತ್ತು ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯವರು ಉದ್ದೇಶಪೂರ್ವಕವಾಗಿ ರಾಜಕೀಯ ಪ್ರೇರಿತ ಐಟಿ ದಾಳಿಗಳನ್ನು ಮಾಡಿಸುತ್ತಿದ್ದಾರೆ. ಬಿಜೆಪಿ ನಾಯಕರ ಬಳಿ ಹಣ ಇಲ್ಲವೇ? ಅವರ ಮೇಲೆ ಏಕೆ ಐಟಿ ದಾಳಿಯಾಗುತ್ತಿಲ್ಲ. ಬಿಜೆಪಿಯ ನಾಯಕರು ಏನು ಕೈಮುಗಿದು ಮತ ಯಾಚಿಸುತ್ತಿದ್ದಾರಾ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಐಟಿ  ಅಧಿಕಾರಿಗಳ ದಾಳಿ ಸಂದರ್ಭದಲ್ಲಿ 10 ರೂಪಾಯಿ ಸಹ ಅಧಿಕಾರಿಗಳ ಕೈಗೆ ಸಿಗಲಿಲ್ಲವಾದರೂ ಮಾಧ್ಯಮಗಳಲ್ಲಿ ಕೋಟ್ಯಾಂತರ ಹಣ ಸಿಕ್ಕಿದೆ ಎಂದು ಸುಳ್ಳು ಸುದ್ದಿ ಪ್ರಕಟಿಸಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು. ಐಟಿ ದಾಳಿ ವಿಚಾರದ ಬಗ್ಗೆ ಗಮನ ಹರಿಸಲಾಗಿದ್ದು, ಬಿಜೆಪಿಯವರು ಏನು ಮಾಡುತ್ತಾರೆ ಎನ್ನುವುದರ ಮೇಲೆ ತಮ್ಮ ಮುಂದಿನ ಹೋರಾಟ ನಿರ್ಧಾರವಾಗಲಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯನ್ನು ಯಡಿಯೂರಪ್ಪ ಉಳಿಸಿಕೊಂಡಿಲ್ಲ. ಯಡಿಯೂರಪ್ಪ ತಮ್ಮ ಮೇಲೆ ದಾಖಲಿಸಿರುವ ಪ್ರಕರಣಗಳ ವಿರುದ್ಧ ಕಳೆದ 12 ವರ್ಷಗಳಿಂದ  ತಾವು ಹೋರಾಟ ಮಾಡಿಕೊಂಡು ಬರುತ್ತಿರುವುದಾಗಿ  ಕುಮಾರಸ್ವಾಮಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com