ಕುಂದಗೋಳ ಉಪ ಚುನಾವಣೆ: ಕಾಂಗ್ರೆಸ್-ಜೆಡಿಎಸ್ ನ 9 ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್

ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದ 9 ಅಭ್ಯರ್ಥಿಗಳು ಗುರುವಾರ ನಾಮಪತ್ರ ವಾಪಸ್ ಪಡೆದಿದ್ದಾರೆ.
ಬಂಡಾಯ ಅಭ್ಯರ್ಥಿಗಳ ಜತೆ ಜಮೀರ್ ಅಹ್ಮದ್ ಖಾನ್, ವಿನಯ್ ಕುಲಕರ್ಣಿ
ಬಂಡಾಯ ಅಭ್ಯರ್ಥಿಗಳ ಜತೆ ಜಮೀರ್ ಅಹ್ಮದ್ ಖಾನ್, ವಿನಯ್ ಕುಲಕರ್ಣಿ
ಕುಂದಗೋಳ: ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು ನಾಮಪತ್ರ ಸಲ್ಲಿಸಿದ್ದ 9 ಅಭ್ಯರ್ಥಿಗಳು ಗುರುವಾರ ನಾಮಪತ್ರ ವಾಪಸ್ ಪಡೆದಿದ್ದಾರೆ. ಆ ಮೂಲಕ ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಎದುರಾಗಿದ್ದು ಆತಂಕ ನಿವಾರಣೆಯಾಗಿದ್ದು, ಸಚಿವ ಜಮೀರ್ ಅಹಮದ್ ಖಾನ್ ಹಾಗೂ ವಿನಯ್ ಕುಲಕರ್ಣಿ ನಡೆಸಿದ ಸಂಧಾನ ಯಶಸ್ವಿಯಾಗಿದೆ.
ಹುಬ್ಬಳ್ಳಿಯಲ್ಲಿ ನಿನ್ನೆ ತಡರಾತ್ರಿಯಿಂದ ಬಂಡಾಯ ಅಭ್ಯರ್ಥಿಗಳ ಜೊತೆ ಸಚಿವ ಜಮೀರ್ ಅಹಮದ್ ಖಾನ್, ಮಾಜಿ ಸಚಿವ ವಿನಯ್ ಕುಲಕರ್ಣಿ ನಡೆಸಿದ ಸಂಧಾನ ಕೊನೆಗೂ ಯಶಸ್ವಿಯಾಗಿದೆ .
ಇಂದು ಕುಂದಗೋಳ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಎಲ್ಲಾ ಬಂಡಾಯ ಅಭ್ಯರ್ಥಿಗಳು ಜಮೀರ್ ಸಮ್ಮುಖದಲ್ಲಿಯೇ ನಾಮಪತ್ರಗಳನ್ನು ವಾಪಸ್ ಪಡೆದರು.
ಪಕ್ಷದ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಬಂಡಾಯವೆದಿದ್ದ ಸುರೇಶ್​ ಸವಣೂರ , ಎಚ್​.ಎಲ್​.ನದಾಫ್​, ಚಂದ್ರಶೇಖರ್​ ಜುಟ್ಟಲ್​, ಜೆ.ಡಿ.ಘೋರ್ಪಡೆ ,ವಿಶ್ವನಾಥ  ಕುಬಿಹಾಳ , ಶಿವಾನಂದ ಬೆಂತೂರು, ತೊಕ್ಕಣ್ಣ, ಯಲ್ಲಪ್ಪ ಸೇರಿ ಎಂಟು ಮಂದಿ ನಾಮಪತ್ರ ಸಲ್ಲಿಸಿದ್ದರು. 
ಜೊತೆಗೆ ಜೆಡಿಎಸ್ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಹಜರತ್ ಆಲಿ ಶೇಖ ನಾಮಪತ್ರ ಸಲ್ಲಿಸಿದ್ದು, ಅವರು ಸಹ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಆಮೂಲಕ ಕಾಂಗ್ರೆಸ್ 8 ಜೆಡಿಎಸ್ ನ  ಓರ್ವ ಬಂಡಾಯ ಅಭ್ಯರ್ಥಿ ಕಣದಿಂದ ಹಿಂದೆ ಸರಿಯವಂತೆ ಮಾಡುವಲ್ಲಿ ಜಮೀರ್ ಅಹಮದ್ ಯಶಸ್ವಿಯಾಗಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ಪಕ್ಷದಲ್ಲಿ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ, ಕೆಲವರು ಬೇಸರಗೊಂಡು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಅವರ ಮನವೊಲಿಸಿದ್ದು ಎಲ್ಲಾ 9 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಶಿವಾನಂದ ಬೆಂತೂರ್ ಪ್ರತ್ಯೇಕವಾಗಿ ಬಂದು ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಅವರು ಹೇಳಿದರು.
ನಾಮಪತ್ರ ವಾಪಸ್ ಪಡೆಯಲು ಅವರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ. ಎಲ್ಲರು ಮೂಲ ಕಾಂಗ್ರೆಸ್ಸಿಗರಾಗಿದ್ದು ಕೆಲವೊಂದು ವಿಚಾರಗಳಲ್ಲಿ ಬೇಸರಗೊಂಡಿದ್ದರು. ಈಗ ಎಲ್ಲವನ್ನು ಸರಿಪಡಿಸಲಾಗಿದೆ. ಪಕ್ಷದ ನಾಯಕರ ಸೂಚನೆ ಮೇರೆಗೆ ವಿನಯ್ ಕುಲಕರ್ಣಿ, ಅಬ್ಬಯ್ಯ ಪ್ರಸಾದ್, ಅನಿಲ್ ಲಾಡ್ ಸೇರಿ ಅಸಮಾಧಾನಿತರ ಜೊತೆ ಚರ್ಚಿಸಿ ಗೊಂದಲ ಬಗೆಹರಿಸಿದ್ದೇವೆ ಎಂದು ಅವರು ತಿಳಿಸಿದರು. 
ನಾಮಪತ್ರ ವಾಪಸ್ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಾನಂದ ಬೆಂತೂರು, ತನಗೆ  ಟಿಕೆಟ್ ನೀಡುವುದಾಗಿ ಹೇಳಿ ಅಹಿಂದ ನಾಯಕರು ನಂಬಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ. ನನಗೆ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದಾಗಿನಿಂದಲೂ ನಿರಂತರ ಅನ್ಯಾಯ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಉಪ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com