ಉಪ ಚುನಾವಣೆ: ಚಿಂಚೋಳಿಯಲ್ಲಿ 17, ಕುಂದಗೋಳದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿ

ರಾಜ್ಯದಲ್ಲಿ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಅಂತಿಮವಾಗಿ ಚಿಂಚೊಳಿಯಲ್ಲಿ...
ಸಂಜೀವ್ ಕುಮಾರ್
ಸಂಜೀವ್ ಕುಮಾರ್
ಬೆಂಗಳೂರು: ರಾಜ್ಯದಲ್ಲಿ ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ಮೇ 19ರಂದು ಉಪಚುನಾವಣೆ ನಡೆಯಲಿದ್ದು, ಅಂತಿಮವಾಗಿ ಚಿಂಚೊಳಿಯಲ್ಲಿ 17 ಹಾಗೂ ಕುಂದಗೋಳದಲ್ಲಿ 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
ಇಂದು ರಾಜ್ಯ ಚುನಾವಣಾ ಆಯೋಗದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಅಭ್ಯರ್ಥಿಗಳ ನಾಮಪತ್ರ ಪಡೆಯಲು ನಿನ್ನೆ ಕೊನೆಯ ದಿನವಾಗಿತ್ತು. ಚಿಂಚೋಳಿಯಲ್ಲಿ 2 ರಾಷ್ಟ್ರೀಯ, 5 ಪ್ರಾದೇಶಿಕ ಪಕ್ಷಗಳ ಹಾಗೂ 11 ಸ್ವತಂತ್ರ್ಯ ಅಭ್ಯರ್ಥಿಗಳು ಕಣದಲ್ಲಿದ್ದರೆ, ಕುಂದಗೋಳದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ಹೊರತುಪಡಿಸಿ 5 ಸ್ವತಂತ್ರ್ಯ ಅಭ್ಯರ್ಥಿಗಳಿದ್ದಾರೆ ಎಂದರು.
ಚಿಂಚೋಳಿಯಲ್ಲಿ  99 ಸಾವಿರ ಪುರುಷರು, 97 ಸಾವಿರ ಮಹಿಳೆಯರು ಹಾಗೂ 16 ತೃತೀಯ ಲಿಂಗಿಗಳು ಸೇರಿ ಒಟ್ಟು 1.93 ಲಕ್ಷ ಮತದಾರರಿದ್ದಾರೆ. ಚಿಂಚೋಳಿಯಲ್ಲಿ 214 ಮತಗಟ್ಟೆಗಳಿದ್ದು, 2 ಸಖಿ ಹಾಗೂ ದಿವ್ಯಾಂಗ ಮತಗಟ್ಟೆಗಳಿವೆ. ಈ ಮತಗಟ್ಟೆಗಳಲ್ಲಿ ಒಟ್ಟು 310 ಬ್ಯಾಲೆಟ್ ಯೂನಿಟ್ ಹಾಗೂ 340 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ. 60 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದರು. 
ಕುಂದಗೋಳದಲ್ಲಿ 97 ಸಾವಿರ ಪುರುಷರು, 91 ಸಾವಿರ ಮಹಿಳೆಯರು, 5 ತೃತೀಯ ಲಿಂಗಿಗಳು ಸೇರಿ 1.89 ಲಕ್ಷ ಮತದಾರರಿದ್ದಾರೆ. 241 ಮತಗಟ್ಟೆಗಳು, 2 ಸಖಿ ಹಾಗೂ ದಿವ್ಯಾಂಗ ಮತಗಟ್ಟೆಗಳು ಹಾಗೂ 300 ವಿವಿಪ್ಯಾಟ್ ಗಳನ್ನು ಬಳಸಲಾಗುತ್ತಿದೆ. 25 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ, ವೆಬ್ ಕ್ಯಾಮೆರಾ, ಮೈಕ್ತೋ ಅಬ್ಸರ್ವರ್ ಹಾಗೂ ವಿಡಿಯೋಗ್ರಾಫರ್ ಗಳನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. 
ಕ್ರಿಮಿನಲ್‌ ಹಿನ್ನೆಲೆಯುಳ್ಳ ಅಭ್ಯರ್ಥಿಗಳು ತಮ್ಮ ವಿರುದ್ಧದ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಮೂರು ಬಾರಿ ಜಾಹೀರಾತು ನೀಡಬೇಕು. ನಿಗದಿತ ಅವಧಿಯಲ್ಲಿ ಜಾಹೀರಾತು ನೀಡದ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಮತದಾರರಿಗಾಗಿ ಸಹಾಯ ವಾಣಿ - 1950.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com