ಯಡಿಯೂರಪ್ಪ ಮಾನ ಮಾರ್ಯದೆ ಇಲ್ಲದ 3 ದಿನದ ಮುಖ್ಯಮಂತ್ರಿ: ಸಿದ್ದರಾಮಯ್ಯ

ಕೇವಲ ಮೂರು ದಿನ ಮುಖ್ಯಮಂತ್ರಿಯಾಗಿ ಮಾನ ಮರ್ಯಾದೆಯನ್ನು ಕಳೆದುಕೊಂಡಿರುವ ಯಡಿಯೂರಪ್ಪ ಒಬ್ಬ ಮಹಾನ್ ಸುಳ್ಳುಗಾರ....

Published: 10th May 2019 12:00 PM  |   Last Updated: 10th May 2019 04:51 AM   |  A+A-


Siddaramaiah slams BS Yeddyurappa over comments on 20 dissident congress MLA's

ಸಿದ್ದರಾಮಯ್ಯ

Posted By : LSB LSB
Source : UNI
ಕಲಬುರಗಿ: ಕೇವಲ ಮೂರು ದಿನ ಮುಖ್ಯಮಂತ್ರಿಯಾಗಿ ಮಾನ ಮರ್ಯಾದೆಯನ್ನು ಕಳೆದುಕೊಂಡಿರುವ ಯಡಿಯೂರಪ್ಪ ಒಬ್ಬ ಮಹಾನ್ ಸುಳ್ಳುಗಾರ. ಯಡಿಯೂರಪ್ಪ  ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಧಿಕಾರದ ಲಾಲಸೆ ಹೊಂದಿದ್ದಾರೆ ಎಂದು ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕಾಂಗ್ರೆಸ್‍ನ 20 ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಅಸಮಾಧಾನವಿದೆ. ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿಯ ಸಂಖ್ಯಾಬಲ 109 ಆಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಂತಹ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ‍್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದರು. 

ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶಾಸಕರ ಸಂಖ್ಯಾಬಲವನ್ನು ಹೊಂದಿದರಷ್ಟೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಾಧ್ಯ. ಶಾಸಕರ ಖರೀದಿ ಮೂಲಕ ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಅಧಿಕಾರದ ದಾಹ ಯಡಿಯೂರಪ್ಪಗೆ ಹೆಚ್ಚಾಗಿದೆ. ಶಾಸಕರನ್ನು ಖರೀದಿ ಮಾಡುವಷ್ಟು ಹಣ ಯಡಿಯೂರಪ್ಪ ಅವರಿಗೆ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.

ಅಸಮಾಧಾನವಿರುವವರು ಎಲ್ಲಾ ಪಕ್ಷಗಳಲ್ಲಿಯೂ ಇರುತ್ತಾರೆ. ಅಂದ ಮಾತ್ರಕ್ಕೆ ಅಸಮಾಧಾನಿತರನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ‍್ಯವೇ? ಕಾಂಗ್ರೆಸ್‍ನಲ್ಲಿ ಅತೃಪ್ತರು ಯಾರೂ ಇಲ್ಲ. ನಿಜವಾದ ಅತೃಪ್ತರು ಇರುವುದು ಬಿಜೆಪಿಯಲ್ಲಿ. ಉಮೇಶ್ ಜಾಧವ್ ಅವರನ್ನು ಖರೀದಿಸಲು ಬಿಜೆಪಿಗೆ ಹಣ ಎಲ್ಲಿಂದ ಬಂತು? ಬಿಜೆಪಿಯವರಂತೆ ಕಾಂಗ್ರೆಸ್‍ ಯಾರನ್ನೂ ಹಣಕೊಟ್ಟು ಖರೀದಿಸುವ ಕೆಲಸ ಮಾಡಲಿಲ್ಲ. ಚಿಂಚೋಳಿ, ಕುಂದಗೋಳ ಉಪಚುನಾವಣೆಯಲ್ಲಿ ತಿಪ್ಪರಲಾಗ ಹಾಕಿದರೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂಬ ಹೇಳಿಕೆ ನೀಡಿದ್ದ ಕೆ.ಎಸ್.ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಿಎಂ, ನಾನು ಈಗಾಗಲೇ ಐದು ವರ್ಷ ಮುಖ್ಯಮಂತ್ರಿಯಾಗಿದ್ದೆ. ಐದು ವರ್ಷ ಮುಖ್ಯಮಂತ್ರಿಯಾಗುತ್ತೇನೆ ಎಂದು ಈಶ್ವರಪ್ಪಗೆ ಗೊತ್ತಿತ್ತಾ? ಮುಂದೆ ನಾನು ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ ಎನ್ನುವುದು ಭವಿಷ್ಯದ ಪ್ರಶ್ನೆ. ಈಶ್ವರಪ್ಪ ಇನ್ನೂ ಏಕೆ ಮುಖ್ಯಮಂತ್ರಿಯಾಗಿಲ್ಲ. ನನ್ನ ಬಗ್ಗೆ ಮಾತನಾಡಲು ಈಶ್ವರಪ್ಪಗೆ ನಾಚಿಕೆಯಾಗುವುದಿಲ್ಲವೇ ಎಂದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp