ದೇವಸ್ಥಾನದಲ್ಲಿ ಸಿಎಂ ಎದುರಿಗೆ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಮುಜುಗರಗೊಂಡ ಅರ್ಚಕ!

ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರನ್ನು ವ್ಯಂಗ್ಯ ...

Published: 15th May 2019 12:00 PM  |   Last Updated: 15th May 2019 12:10 PM   |  A+A-


CM H D Kumaraswamy in temple

ದೇವಸ್ಥಾನದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

Posted By : SUD SUD
Source : The New Indian Express
ಕಲಬುರಗಿ: ಲೋಕಸಭೆ ಚುನಾವಣೆಯ ಹೊತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಕುಮಾರಸ್ವಾಮಿ ಅವರನ್ನು ವ್ಯಂಗ್ಯ ಮಾಡುವ 'ನಿಖಿಲ್ ಎಲ್ಲಿದ್ದೀಯಪ್ಪಾ' ವಾಕ್ಯ ಭಾರಿ ಟ್ರೋಲ್ ಆಗಿತ್ತು, ಎಷ್ಟರ ಮಟ್ಟಿಗೆ ಎಂದರೆ ಸ್ವತಃ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರೇ ಈ ಬಗ್ಗೆ ಮಾತನಾಡಿ ಟ್ರೋಲ್ ಮಾಡಿದವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.

ನಿನ್ನೆ ಕಲಬುರಗಿಯ ಅಫ್ಜಲ್ ಪುರ ತಾಲ್ಲೂಕಿನ ದೇವಳ ಗಾಣಗಾಪುರ ದತ್ತಾತ್ರೇಯ ದೇವಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಪೂಜೆ ಸಲ್ಲಿಸಲು ಹೋಗಿದ್ದರು. ಆಗ ಅರ್ಚಕರೊಬ್ಬರು ಸ್ವತಃ ಕುಮಾರಸ್ವಾಮಿ ಮುಂದೆಯೇ 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಬಿಟ್ಟಿದ್ದಾರೆ. ಅವರೊಂದಿಗೆ ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರು ದೇವಸ್ಥಾನಕ್ಕೆ ಹೋಗಿದ್ದರು, ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕರು ಅಚಾನಕ್ಕಾಗಿ 'ನಿಖಿಲ್ ಎಲ್ಲಿದ್ದೀಯ' ಎಂದು ಕರೆದಿದ್ದಾರೆ, ಇದರಿಂದ ಕೆಲ ಕಾಲ ಅಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಅರ್ಚಕ ದತ್ತಾತ್ರೆಯ ಅವರ ಮಗನ ಹೆಸರೂ ನಿಖಿಲ್ ಎಂದೇ ಆಗಿದೆ. ಆತ ಪೂಜೆಗೆ ಬೇಕಾದ ಸಾಮಗ್ರಿಯೊಂದನ್ನು ತರಲು ಹೋದವ, ಜನಜಂಗುಳಿಯ ಹಿಂದೆ ಸಿಲುಕಿಕೊಂಡಿದ್ದಾನೆ, ಅದಕ್ಕೆ ಅರ್ಚಕ ದತ್ತಾತ್ರೆಯ ಅವರು ನಿಖಿಲ್ ಎಲ್ಲಿದ್ದೀಯಾ? ಎಂದು ಜೋರಾಗಿ ಪ್ರಶ್ನಿಸಿದ್ದಾರೆ.

ಇದನ್ನು ತಪ್ಪು ತಿಳಿದುಕೊಂಡ ಕುಮಾರಸ್ವಾಮಿ ಬೆಂಬಲಿಗರು ಅರ್ಚಕರ ಮೇಲೆ ರೇಗಿದ್ದಾರೆ, ಕೂಡಲೇ ಎಚ್ಚೆತ್ತುಕೊಂಡ ಅರ್ಚಕರು ಕುಮಾರಸ್ವಾಮಿ ಅವರಿಗೆ ಇರುವ ವಿಷಯವನ್ನು ವಿವರಿಸಿದ್ದಾರೆ. ತಮ್ಮ ಮಗನನ್ನು ಕರೆದು ಪರಿಚಯ ಮಾಡಿಸಿ, ಫೋಟೋ ತೆಗೆದುಕೊಂಡರು,
ಈ ವರ್ಷ ಸಿಎಂ ಕುಮಾರಸ್ವಾಮಿಯವರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಎರಡನೇ ಸಲ. ಮುಖ್ಯಮಂತ್ರಿಯವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಮಗನ ಗೆಲುವಿಗೆ ಮತ್ತು ಮೈತ್ರಿ ಸರ್ಕಾರ ಸುಗಮವಾಗಿ ಸಾಗುವಂತೆ ಕೋರಿ ಪೂಜೆ ಸಲ್ಲಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ ತಾವು ಈ ವರ್ಷ ಉತ್ತಮ ಮಳೆ, ಬೆಳೆಗಾಗಿ ಪೂಜೆ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp