'ಅದೃಷ್ಟ ಮತ್ತು ಕಾಲ ಕೂಡಿ ಬರಬೇಕು'; ಖರ್ಗೆಗೆ ಸಿಎಂ ಪಟ್ಟದ ಕುರಿತ ಎಚ್ ಡಿಕೆ ಹೇಳಿಕೆಗೆ ಸಿದ್ದು ಟಾಂಗ್!

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷ ಟಾಂಗ್ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು ಎಂಬ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಸಮರ್ಥವಾಗಿ ಮತ್ತು ಯಶಸ್ವಿಯಾಗಿ ನಿರ್ವಹಣೆ ಮಾಡಬಲ್ಲ ಬಹಳಷ್ಟು ನಾಯಕರು ಇದ್ದಾರೆ; ಆದರೆ ಅದೃಷ್ಟ ಮತ್ತು ಕಾಲ ಕೂಡಿ ಬರಬೇಕು ಎಂದು ಬಹಳ ನಯವಾಗಿಯೇ ಟ್ವೀಟ್ ಮಾಡಿದ್ದಾರೆ.
'ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ಹಿಂದೆಯೇ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಹಾಲಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿರುವುದು ಸರಿಯಾಗಿದೆ, ಸಮಂಜಸವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಒಳರಾಜಕೀಯದ ಅರ್ಥ ಬೇಡ : ಸಿದ್ದರಾಮಯ್ಯ ಸ್ಪಷ್ಟನೆ
ಇದೇ ವೇಳೆ ಸಿದ್ದರಾಮಯ್ಯ ಟ್ವೀಟ್ ಕುರಿತಂತೆ ಉಂಟಾಗಿರುವ ಗೊಂದಲಕ್ಕೆ ಸಂಬಂಧಿಸಿದಂತೆ ಮತ್ತೆ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, 'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ನಾಯಕರು ಬಹಳಷ್ಟು ಜನ ಇದ್ದಾರೆ ಎಂಬ ತಮ್ಮ ಟ್ವೀಟ್ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. 'ಇಂದೇ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಹೇಳಿಲ್ಲ. ಅದಕ್ಕೆ ಬೇರೆ ಬೇರೆ ಒಳರಾಜಕೀಯ ಅರ್ಥಗಳನ್ನು ಕಲ್ಪಿಸಬೇಕಾಗಿಲ್ಲ. ಮೇಲಾಗಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಹೇಳಿದರು. ಅಂತೆಯೇ ಎರಡೂ ಪಕ್ಷದಲ್ಲಿ ಹುದ್ದೆ ನಿರ್ವಹಿಸುವಂತಹ ಸಮರ್ಥ ನಾಯಕರಿದ್ದಾರೆ ಎಂದು ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸಿದ್ದರಾಮಯ್ಯ ಹೇಳಿದರು.
ಸಿದ್ದು ಹೇಳಿಕೆಯಲ್ಲಿ ತಪ್ಪಿಲ್ಲ: ಕಾಂಗ್ರೆಸ್ ಸಮರ್ಥನೆ 
ಇದೇ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಸಂಬಂಧ ಕಾಂಗ್ರೆಸ್ ಪಕ್ಷದ ನಾಯಕರು ಸಮರ್ಥನೆ ನೀಡಿದ್ದಾರೆ. 'ಸಿದ್ದರಾಮಯ್ಯ ಹೇಳಿಕೆ ಸರಿಯಾಗಿದೆ, ಅದರಲ್ಲಿ ಯಾವುದೇ ತಪ್ಪು ಕಾಣಿಸುತ್ತಿಲ್ಲ. ರಾಜ್ಯದ 224 ಶಾಸಕರಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಕಾಂಗ್ರೆಸ್ ಶಾಸಕ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡ ಹೇಳಿಕೆ ನೀಡಿದ್ದು,  'ಖರ್ಗೆ ಎಂದೋ ಮುಖ್ಯಮಂತ್ರಿ ಆಗಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿರುವುದು ಸರಿಯಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಖರ್ಗೆ ಅವರು,  'ದಲಿತ ಎಂಬ ಕಾರಣಕ್ಕೆ ಅಯ್ಯೋ ಪಾಪ ಎಂದು ಹೇಳಿ ಯಾರದ್ದೋ ಕನಿಕರಕ್ಕಾಗಿ ಸಿಎಂ ಹುದ್ದೆ ನೀಡುವುದಾದರೆ ನನಗೆ ಬೇಡವೇ ಬೇಡ, ನನ್ನ ಯೋಗ್ಯತೆ, ಅರ್ಹತೆ ಮತ್ತು ಪಕ್ಷಕ್ಕಾಗಿ ನಾನು ಮಾಡಿದ ಕೆಲಸ ಕಾರ್ಯಗಳನ್ನು ಗುರುತಿಸಿ ಹುದ್ದೆ ನೀಡುವುದಾದರೆ ಮಾತ್ರ ನಾನು ಅದನ್ನು ಒಪ್ಪಿಕೊಳ್ಳಲು ಸಿದ್ಧನಿದ್ದೇನೆಯೇ ಹೊರತು ದಲಿತ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಪಟ್ಟ ಕೊಡುವುದು ಬೇಡ” ಎಂದು ತಮ್ಮ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com