ರಾಜೀವ್ ಗಿಂತ ಗೋಡ್ಸೆ ಶ್ರೇಷ್ಠ: ವಿವಾದಾತ್ಮಕ ಟ್ವೀಟ್ ಗೆ ಸಂಸದ ಕಟೀಲ್ ಕ್ಷಮೆಯಾಚನೆ

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಉಗ್ರ ಕಸಬ್, ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಜತೆ ಹೋಲಿಸಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇದೀಗ ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ
ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ
ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಉಗ್ರ ಕಸಬ್, ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆ ಜತೆ ಹೋಲಿಸಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇದೀಗ ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಿದ್ದಾರೆ.
ನಳಿನ್ ಕುಮಾರ್ ಅವರ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅವರು ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅ;ಲ್ಲದೆ "ನನ್ನಿಂದ ನೋವಾಗಿದ್ದರೆ ಕ್ಷಮಿಸಿ, ಇಲ್ಲಿಗೆ ಈ ಚರ್ಚೆ ಮುಗಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.
"ನನ್ನ  ಕೊನೆಯ ಎರಡು ಟ್ವೀಟ್ ಗಳಿಗೆ ಟೀಕೆ ವ್ಯಕ್ತವಾಗಿದ್ದನ್ನು ಗಮನಿಸಿದ್ದೇನೆ. ಯಾರಿಗಾದರೂ ಅದರಿಂದ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಯಾರನ್ನೂ ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನೋವಾಗಿದೆಯೆಂದು ತಿಳಿದ ತಕ್ಷಣ ಟ್ವೀಟ್ ಹಿಂಪಡೆದಿದ್ದೇನೆ. ಚರ್ಚೆ ಇಲ್ಲಿಗೆ ಮುಗಿಸೋಣ" ಸಂಸದ ನಳಿನ್ ಟ್ವೀಟ್ ಮೂಲಕ ಕ್ಷಮೆ ಕೋರಿದ್ದಾರೆ.
ಸಂಸದರ ಈ ಟ್ವೀಟ್ ರಾಷ್ಟ್ರಮಟ್ಟದ ನಾಯಕರಿಗೂ ಇರುಸುಮುರುಸು ತಂದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಈ ಕುರಿತು ವ್ಯಾಪಕವಾಗಿ ಆಕ್ರೋಶ ವ್ಯಕ್ತಪಡಿಸಿತ್ತು.
ಇದಕ್ಕೆ ಮುನ್ನ ಸಂಸದ ನಳಿನ್ ಕುಮಾರ್ ಕಟೀಲ್ ತಾವು "ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?" ಎಂಬ ವಿವಾದಾತ್ಮಕ ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಈಡಾಗಿದ್ದರು.
ಅಕೌಂಟ್ ಹ್ಯಾಕ್ ಆಗಿದೆ ಎಂದ ಅನಂತ್ ಕುಮಾರ್ ಹೆಗಡೆ
ಈ ನಡುವೆ ಉತ್ತರ ಕನ್ನಡ ಸಂಸದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಟ್ವಿಟ್ಟರ್ ಖಾತೆಗೆ ದುಷ್ಕರ್ಮಿಗಳು ಕನ್ನ ಹಾಕಿದ್ದಾರೆ. ನನ್ನ ಟ್ವಿಟ್ಟರ್ ಖಾತೆ ನಿನ್ನೆ (ಗುರುವಾರ) ಹ್ಯಾಕ್ ಆಗಿದೆ. ಹಾಗಾಗಿ ಇದರಲ್ಲಿನ ವಿವಾದಾತ್ಮಕ ಟ್ವೀಟ್ ಅಳಿಸಿ ಹಾಕಿದ್ದೇನೆ ಎಂದು ತಾವು ಸ್ಪಷ್ತನೆ ನೀಡಿದ್ದಾರೆ.
ನನ್ನ ಖಾತೆಯನ್ನು ಹ್ಯಾಕ್ ಮಾಡಿದವರು ನನ್ನ ಹೆಸರಲ್ಲಿ ಗೋಡ್ಸೆ ಬಗೆಗೆ ಸಮರ್ಥನೆ ಕೊಟ್ಟಿದ್ದಾರೆ. ಇದು ನನ್ನ ಗಮನಕ್ಕೆ ಬಂದೊಡನೆ ಅಳಿಸಿ ಹಾಕಿದ್ದೇನೆ. ನಾನೆಂದೂ ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ, ನನ್ನ ಹೆಸರಲ್ಲಿ ಆದ ಪ್ರಮಾದಕ್ಕೆ ವಿಷಾದಿಸುತ್ತೇನೆ ಎಂದು ಅನಂತ್ ಕುಮಾರ್ ಹೆಗಡೆ ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಜೆಪಿ ಹೈಕಮಾಂಡ್ ಗರಂ
ಈ ನಡುವೆ ಠಾಕೂರ್ ಪ್ರಗ್ನಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಹೆಗಡೆ ಅವರುಗಳ ಗೋಡ್ಸೆ ಕುರಿತ ಹೇಳಿಕೆಗಳ ಬಗೆಗೆ ಬಿಜೆಪಿ ಹೈಕಮಾಂಡ್ ಸಹ ಗರಂ ಆಗಿದೆ. ಆಯಾ ಹೇಳಿಕೆಗಳು ಅವರ ವೈಯುಕ್ತಿಕ ಅಭಿಪ್ರಾಯ, ಇದಕ್ಕೆ ಪಕ್ಷ ಹೊಣೆಯಲ್ಲ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ಸಂಬಂಧ ಶಿಸ್ತು ಸಮಿತಿ ಕ್ರಮ ಜರುಗಿಸಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com