ಗೋಡ್ಸೆ ಹೊಗಳುವ ನಾಯಕರ ವಿರುದ್ಧ ಕ್ರಮ ಜರುಗಿಸಲಿ: ಮಲ್ಲಿಕಾರ್ಜುನ ಖರ್ಗೆ

ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಹೊಗಳುವ ನಾಯಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಲಬುರಗಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಹೊಗಳುವ ನಾಯಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಂಸದ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಕಲಬುರಗಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸಿ, ಹಾಡಿಹೊಗಳುವ ನಾಯಕರಿಂದಲೇ ದೇಶಕ್ಕೆ ಅಪಾಯ ಮತ್ತು ಗಂಡಾಂತರ ಕಾದಿದೆ. ಇಂತಹ ಮನಃಸ್ಥಿತಿಯ ಜನರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದ್ದಾರೆ.
'ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಮಹಾನ್ ದೇಶಭಕ್ತ ಎಂದು ಬಿಜೆಪಿ ನಾಯಕರು ಹಾಡಿ ಹೊಗಳುವ ಮೂಲಕ ದೇಶವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಗಾಂಧಿ ಅವರ ಬಗ್ಗೆ ನಿಜಕ್ಕೂ ಮೋದಿ ಮತ್ತು ಅಮಿತ್ ಶಾ ಅವರಿಗೆ ಗೌರವ, ಕಾಳಜಿ ಇದ್ದಲ್ಲಿ ಇಂತಹ ಟೀಕೆ, ಹೇಳಿಕೆ ನೀಡಿ, ರಾಷ್ಟ್ರಕ್ಕೆ ಅಪಮಾನ ಮಾಡಿರುವ ಪಕ್ಷದ ನಾಯಕರ ವಿರುದ್ಧ ಕ್ರಮ ಜರುಗಿಸಬೇಕೆಂದು' ಖರ್ಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, 'ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ.  ಮಹಾತ್ಮಾ ಗಾಂಧಿ, ರಾಜೀವ್‌ ಗಾಂಧಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದವರು. ದೇಶದ ಐಕ್ಯತೆಗಾಗಿ ತ್ಯಾಗ ಮಾಡಿದವರು. ಇಂತಹವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಜನರ, ಇಂತಹ ವಿಚಾರಧಾರೆಯ ಜನರ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶಕ್ಕೆ ಆಪತ್ತು, ಅಪಾಯ. ಇನ್ನು ಮೇಲಾದರೂ ನಾಲಗೆಯನ್ನು ಬಿಗಿ ಹಿಡಿದು ಮಾತನಾಡಬೇಕು" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗಾಂಧೀಜಿಯವರು ದೇಶಕ್ಕಾಗಿ ಸ್ವಾತಂತ್ರ್ಯ ತಂದು ಕೊಟ್ಟರು. ಪ್ರಧಾನಿ ಮೋದಿ ಒಂದು ಕಡೆ ಗಾಂಧೀಜಿಯವರನ್ನು ಹೊಗಳುತ್ತಾರೆ. ಇನ್ನೊಂದು ಕಡೆ ಇಂತಹ ವ್ಯಕ್ತಿಗಳ ಹೇಳಿಕೆಗಳಿಗೆ ಮೌನವಹಿಸುತ್ತಾರೆ. ಅವರ ಮನಸ್ಸಿನಲ್ಲಿ ಇರುವುದು ಒಂದು, ಹೊರಗೆ ತೋರ್ಪಡಿಸುವುದು ಮತ್ತೊಂದು. ಗೋಡ್ಸೆಯನ್ನು ಬಿಜೆಪಿಯವರು ದೇವರಂತೆ ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಹುದ್ದೆ ಚರ್ಚೆಗೆ ಅಂತ್ಯ ಹಾಡಿ
ಇದೇ ವೇಳೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆ ಕುರಿತು ಚರ್ಚೆ ಕುರಿತು ಮಾತನಾಡಿದ ಖರ್ಗೆ, 'ಹಾಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಲೋಕಾಭಿರಾಮವಾಗಿ ಹೇಳಿರುವ ಮಾತಿಗೆ ಹೆಚ್ಚು ಅರ್ಥಕೊಟ್ಟು ಚರ್ಚೆ ಮಾಡುವುದು ಬೇಡ, ಇದಕ್ಕೆ ವಿರಾಮ ಹಾಕಿ. ಒಂದು ಸಾಧಾರಣ ಹೇಳಿಕೆಗೆ ಕಾಂಗ್ರೆಸ್, ಜೆಡಿಎಸ್ ನಾಯಕರು ಮತ್ತು ಮಾಧ್ಯಮ ಇಷ್ಟೊಂದು ಮಹತ್ವ ಕೊಡುತ್ತಿರುವುದು ಏಕೆ ಎಂಬುದು ನನಗಂತೂ ಅರ್ಥವಾಗುತ್ತಿಲ್ಲ. ಕುಮಾರಸ್ವಾಮಿ ಅವರು ಲೋಕಾಭಿರಾಮವಾಗಿ ಚುನಾವಣಾ ಪ್ರಚಾರ ಸಮಯದಲ್ಲಿ ಸಾಂದರ್ಭಿಕವಾಗಿ ಹೇಳಿದ್ದಾರೆ. ಅದನ್ನು ಇಲ್ಲಿಗೆ ನಿಲ್ಲಿಸಿಬಿಡುವುದು ಒಳ್ಳೆಯದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com