ಪಕ್ಷ ವಿರೋಧಿ ಹೇಳಿಕೆ: ಮಾಜಿ ಸಚಿವ ರೋಷನ್ ಬೇಗ್ ಗೆ ಕಾರಣ ಕೇಳಿ ನೋಟಿಸ್ ಜಾರಿ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ...
ರೋಷನ್ ಬೇಗ್
ರೋಷನ್ ಬೇಗ್
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಪಕ್ಷ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರೋಷನ್ ಬೇಗ್ ಗೆ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ.
ಪಕ್ಷಕ್ಕೆ ಮುಜಗರವಾಗುವಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿ ಬಹಿರಂಗವಾಗಿ ಅಸಮಾಧಾನವನ್ನು  ವ್ಯಕ್ತಪಡಿಸುವ ಮೂಲಕ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿ ನಡೆದುಕೊಂಡಿದ್ದೀರಿ. ತಮ್ಮ ಹೇಳಿಕೆಯಿಂದ ಪಕ್ಷದ ಘನತೆ-ಗೌರವಕ್ಕೆ ಕುಂದುಂಟಾಗಿದೆ. ತಮ್ಮ ಹೇಳಿಕೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸುತ್ತೇವೆ. ತಮ್ಮ ವಿರುದ್ದ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ ವೈ ಘೋರ್ಪಡೆ ನೋಟೀಸ್ ನಲ್ಲಿ ಪ್ರಶ್ನಿಸಿದ್ದಾರೆ.   
ಅಲ್ಲದೆ ನೊಟೀಸಿಗೆ 7 ದಿನಗಳ ಒಳಗಾಗಿ ಉತ್ತರಿಸದಿದ್ದಲ್ಲಿ ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇಂದು ನೊಟೀಸ್ ಜಾರಿ ಮಾಡಲಾಗಿದ್ದು, ಸೂಕ್ತ ಹಾಗೂ ಸಮಂಜಸ ಉತ್ತರ ನೀಡದಿದ್ದಲ್ಲಿ  ಪಕ್ಷದ ಪ್ರಾಥಮಿಕ ಸದಸ್ಯತ್ವದಲ್ಲಿ ಅಮಾನತ್ತು ಅಥವಾ ಉಚ್ಛಾಟನೆಯನ್ನು ಮಾಡುವ ಎಚ್ಚರಿಕೆ ನೀಡಲಾಗಿದೆ.
ಮಾಧ್ಯಮಗಳಿಗೆ ಮಾಜಿ ಸಚಿವ ರೋಷನ್ ಬೇಗ್ ಹೇಳಿಕೆ ನೀಡಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಗೆ ಇಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ. ಮತಗಟ್ಟೆ ಸಮೀಕ್ಷೆಯಲ್ಲಿನ ವರದಿಗಳನ್ನು ನೋಡಿದರೆ ಕಾಂಗ್ರೆಸ್ ಅಧೋಗತಿಗೆ ಇಳಿಯುತ್ತಿದೆ ಎಂಬ ಸೂಚನೆ ಕಂಡುಬರುತ್ತಿದೆ ಎಂದಿದ್ದರು.
ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರನ್ನು ಕಡೆಗಣಿಸಿದ್ದು, ಲಿಂಗಾಯತ ಪ್ರತ್ಯೇಕ ಧರ್ಮ  ಮಾಡಲು ಹೊರಟಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುವ ಮೂಲಕ ಮತಗಳ ಧೃವೀಕರಣವಾಗಲು ಆಸ್ಪದ ಮಾಡಿಕೊಟ್ಟಿದ್ದೇ ಚುನಾವಣೆಯಲ್ಲಿ ಹಿನ್ನಡೆಗೆ ಕಾರಣವೆಂದು ಹೇಳಿಕೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷರಾಗಲು ದಿನೇಶ್ ಗುಂಡೂರಾವ್ ಅಸಮರ್ಥ . ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ರೋಷನ್ ಬೇಗ್ ಆಗ್ರಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com