ಅಷ್ಟಕ್ಕೂ ರೋಶನ್ ಬೇಗ್ ಅಸಮಾಧಾನಕ್ಕೆ ಏನು ಕಾರಣ? ಬಲ್ಲ ಮೂಲಗಳು ಹೇಳುವುದು ಹೀಗೆ!

ಎಂಟು ಬಾರಿ ಶಾಸಕರಾಗಿ ಆಯ್ಕೆಯಾದ ರಾಜ್ಯ ಕಾಂಗ್ರೆಸ್ ನ ಅಲ್ಪಸಂಖ್ಯಾತ ಸಮುದಾಯದ ಅತ್ಯಂತ ಪ್ರಮುಖ ನಾಯಕ ಆರ್ ರೋಶನ್ ಬೇಗ್,...

Published: 22nd May 2019 12:00 PM  |   Last Updated: 22nd May 2019 12:11 PM   |  A+A-


Posted By : SUD SUD
Source : The New Indian Express
ಬೆಂಗಳೂರು: ಎಂಟು ಬಾರಿ ಶಾಸಕರಾಗಿ ಆಯ್ಕೆಯಾದ ರಾಜ್ಯ ಕಾಂಗ್ರೆಸ್ ನ ಅಲ್ಪಸಂಖ್ಯಾತ ಸಮುದಾಯದ ಅತ್ಯಂತ ಪ್ರಮುಖ ನಾಯಕ ಆರ್ ರೋಶನ್ ಬೇಗ್, ನಾಳೆಯ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ನಡೆಯಬಹುದಾದ ಸ್ಥಿತ್ಯಂತರಗಳ ಸಮಯದಲ್ಲಿ ಸರಿಯಾಗಿ ಪಕ್ಷದ ಉನ್ನತ ಮಟ್ಟದ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ರೋಶನ್ ಬೇಗ್ ಹೇಳಿಕೆಯ ನಂತರದ ಬೆಳವಣಿಗೆಗಳ ಬಗ್ಗೆ ಅವರನ್ನು ಬಲ್ಲವರು ಹೇಳುವ ಪ್ರಕಾರ ಪಕ್ಷದಲ್ಲಿ ಹೊಸಬರಿಗೆ ಆದ್ಯತೆ ನೀಡಿ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಹಲವು ಸಮಯಗಳಿಂದ ಹೊಗೆಯಾಡುತ್ತಿದ್ದ ಅಸಮಾಧಾನವನ್ನು ಈಗ ಹೊರಹಾಕಿದ್ದಾರೆ.

ತಮ್ಮ ಸ್ವಂತ ಸಾಮರ್ಥ್ಯದಿಂದ ರಾಜಕೀಯದಲ್ಲಿ ಮೇಲೆ ಬಂದು ಗುರುತಿಸಿಕೊಂಡಿರುವ ರೋಶನ್ ಬೇಗ್, ತಮ್ಮ ಕ್ಷೇತ್ರವಾದ ಬೆಂಗಳೂರಿನ ಶಿವಾಜಿನಗರದಲ್ಲಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಧ್ಯೇಯ ಬೆಂಗಳೂರಿನಲ್ಲಿ ಕಾಂಗ್ರೆಸ್ ನ ಪ್ರಮುಖ ಮೂವರು ಅಲ್ಪಸಂಖ್ಯಾತ ನಾಯಕರಾದ ರೋಶನ್ ಬೇಗ್, ಕೆ ಜೆ ಜಾರ್ಜ್ ಮತ್ತು ಎನ್ ಎ ಹ್ಯಾರಿಸ್ ಸುತ್ತವೇ ಗಿರಕಿ ಹೊಡೆಯುತ್ತಿತ್ತು.

ರೋಶನ್ ಬೇಗ್ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು 1985ರಲ್ಲಿ ಜೆ ಹೆಚ್ ಪಟೇಲ್ ನಾಯಕತ್ವದ ಜನತಾ ಪಾರ್ಟಿ ಸರ್ಕಾರದಲ್ಲಿ. ಚುನಾವಣೆಯಲ್ಲಿ ಗೆದ್ದು ಬಂದು ಸಚಿವರಾಗಿಯೂ ಕೆಲಸ ಮಾಡಿದರು. ಕಾಂಗ್ರೆಸ್ ನಲ್ಲಿ ಮತ್ತು ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯನವರು ಮುಖ್ಯ ನಾಯಕರಾದಾಗ ರೋಶನ್ ಬೇಗ್ ಅವರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡರು.

ಆದರೆ ಇಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ತಮ್ಮನ್ನು ಮೂಲೆಗುಂಪು ಮಾಡುತ್ತಿರುವುದು ಸಹಜವಾಗಿ ರೋಶನ್ ಬೇಗ್ ಅವರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕಾಲದಲ್ಲಿ ಕುಮಾರಸ್ವಾಮಿಯವರ ಆಪ್ತನಾಗಿ ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಜಮೀರ್ ಅಹ್ಮದ್ ಖಾನ್ ಬಂದ ನಂತರ ರೋಶನ್ ಬೇಗ್ ಗೆ ಕಾಂಗ್ರೆಸ್ ನಲ್ಲಿ ಪ್ರಾಮುಖ್ಯತೆ ಕಡಿಮೆಯಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಸಭೆಗೆ ಶಿಫಾರಸು ಆಗಿದ್ದ ಹೆಸರುಗಳಲ್ಲಿ ರೋಶನ್ ಬೇಗ್ ಹೆಸರಿತ್ತು. ಆದರೆ ಅವರು ರಾಜ್ಯಸಭೆಗೆ ಆಯ್ಕೆಯಾಗಿರಲಿಲ್ಲ. 2018ರ ವಿಧಾನಸಭೆ ಚುನಾವಣೆ ಮುಗಿದ ನಂತರ ಮೈತ್ರಿ ಸರ್ಕಾರದಲ್ಲಿ ರೋಶನ್ ಬೇಗ್ ಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಜಮೀರ್ ಅಹ್ಮದ್ ಖಾನ್ ಗೆ ಮಣೆ ಹಾಕಲಾಯಿತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧಿಸಬೇಕೆಂಬ ಆಸೆಯಿದ್ದಿತಾದರೂ ಅವರಿಗೆ ಮಣೆ ಹಾಕದೆ ವಿಧಾನಪರಿಷತ್ ಸದಸ್ಯ ರಿಜ್ವಾನ್ ಆರ್ಶದ್ ಅವರಿಗೆ ಟಿಕೆಟ್ ನೀಡಲಾಯಿತು.

ಮಾಜಿ ಕೇಂದ್ರ ಸಚಿವ ದಿವಂಗತ ಸಿ ಕೆ ಜಾಫರ್ ಶರೀಫ್ ನಂತರ ಕಾಂಗ್ರೆಸ್ ನಲ್ಲಿ ಪ್ರಮುಖ ಅಲ್ಪಸಂಖ್ಯಾತ ಸಮುದಾಯದ ಮುಖಂಡನಾಗಿ ಗುರುತಿಸಿಕೊಳ್ಳಬೇಕೆಂದು ಬಯಸಿದ್ದ ರೋಶನ್ ಬೇಗ್ ಅವರಿಗೆ ಇವೆಲ್ಲ ಅಸಮಾಧಾನವಿದೆ. ರೋಶನ್ ಬೇಗ್ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವಾದರೂ ಕೂಡ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಪಕ್ಷಕ್ಕೆ ಅಷ್ಟು ಸುಲಭವಲ್ಲ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp