ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ದೇವೇಗೌಡರ ತಡೆ

ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೋಲಿನ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ಬೆಂಗಳೂರು: ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ಸೋಲಿನ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಪ್ರಜ್ವಲ್ ರೇವಣ್ಣ ಅವರ ನಿರ್ಧಾರಕ್ಕೆ ಸ್ವತಃ ದೇವೇಗೌಡರೇ ತಡೆಒಡ್ಡಿದ್ದಾರೆ. 
ಜನಾದೇಶಕ್ಕೆ ತಲೆಬಾಗಬೇಕು. ಆತುರಕ್ಕೆ ಬುದ್ಧಿ ಕೊಟ್ಟರೆ ಕೆಡುಕಾಗುತ್ತದೆ ಎಂದು ಮಾಜಿ ಪ್ರಧಾನಿ ತಮ್ಮ ಮೊಮ್ಮಗ ಪ್ರಜ್ವಲ್‍ ಗೆ ಬುದ್ಧಿಮಾತು ಹೇಳಿದ್ದಾರೆ.
ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್‍ಗೆ ಬಿಟ್ಟುಕೊಟ್ಟಿದ್ದ ಹೆಚ್.ಡಿ. ದೇವೇಗೌಡ ಆರಂಭದಲ್ಲಿ ಲೋಕಸಭಾ ಚುನಾವಣೆಗೆ ಈ ಬಾರಿ ಸ್ಪರ್ಧಿಸುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದರು. ಕೊನೆಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಮನಸು ಮಾಡಿದ್ದರಾದರೂ ಅದು ಈಡೇರಿರಲಿಲ್ಲ. ಬಳಿಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಹೆಚ್.ಡಿ. ರೇವಣ್ಣ ಇಬ್ಬರೂ ದೇವೇಗೌಡರು ತುಮಕೂರಿನಿಂದಲೇ ಸ್ಪರ್ಧಿಸುವಂತೆ ಒತ್ತಡ ಹೇರಿದ್ದರು. 
ಹೀಗಾಗಿ ತುಮಕೂರಿನಲ್ಲಿ ತಂದೆಯ ಸೋಲು ಹೆಚ್.ಡಿ.ರೇವಣ್ಣ ಅವರಿಗೆ ನೋವುಂಟು ಮಾಡಿದ್ದು, ಪತ್ನಿ ಭವಾನಿ ಅವರೊಂದಿಗೆ ದೇವೇಗೌಡರನ್ನು ಭೇಟಿ ಮಾಡಿದರು. ಅನಿರೀಕ್ಷಿತ ಫಲಿತಾಂಶ ನೋವುಂಟು ಮಾಡಿದೆ. ನಿಮ್ಮ ಸೋಲನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಪುತ್ರ ಪ್ರಜ್ವಲ್ ಗಾಗಿ ಮೂಲ ಕ್ಷೇತ್ರವನ್ನೇ ತಾವು ತ್ಯಾಗ ಮಾಡಬೇಕಾಯಿತು. ಹಾಸನದಿಂದಲೇ ತಾವು ಸ್ಪರ್ಧಿಸಿದ್ದರೆ ನಿರೀಕ್ಷೆಯ ಫಲಿತಾಂಶ ಬರುತ್ತಿತ್ತು ಎಂದು ಭವಾನಿ ರೇವಣ್ಣ, ದೇವೇಗೌಡರ ಬಳಿ ದುಃಖಿಸಿ, ಕ್ಷಮೆ ಯಾಚಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪುತ್ರನ ರಾಜೀನಾಮೆ ವಿಚಾರ ಪ್ರಸ್ತಾಪಿಸಿದಾಗ, ''ಆ ಯೋಚನೆ ಈಗ ಬೇಡ. ಮುಂದೆ ನೋಡೋಣ'' ಎಂದು ದೇವೇಗೌಡರು ತಮ್ಮ ಮಗ, ಸೊಸೆಗೆ ಸಮಾಧಾನ ಹೇಳಿದ್ದಾರೆ ಎನ್ನಲಾಗಿದೆ.
ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಪ್ರಕಟಿಸಿದ್ದ ಪ್ರಜ್ವಲ್ ರೇವಣ್ಣ, ನಗರದಲ್ಲಿಂದು ದೇವೇಗೌಡರನ್ನು ಭೇಟಿಯಾದರು. ಭೇಟಿ ವೇಳೆ, ಆತುರದ ನಿರ್ಧಾರ ಬೇಡ. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಎರಡೂ ಪಕ್ಷದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸಂಗ ಬಂದಿಲ್ಲ ಎಂದು ಮೊಮ್ಮಗ ಪ್ರಜ್ವಲ್‍ ರೇವಣ್ಣಗೆ ದೇವೇಗೌಡರು ತಿಳಿ ಹೇಳಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್, ನಾನು ಬೆಳಿಗ್ಗೆ ತೆಗೆದುಕೊಂಡ ನಿರ್ಧಾರವನ್ನು ದೊಡ್ಡವರಿಗೆ ತಿಳಿಸಿದ್ದೇನೆ. ನನ್ನ ನಿರ್ಧಾರಕ್ಕೆ ಕಾರಣಗಳು ಏನು ಎನ್ನುವುದರ ಬಗ್ಗೆಯೂ ಅವರೊಂದಿಗೆ ಪ್ರಸ್ತಾಪಿಸಿದ್ದೇನೆ. ಆದರೆ ದೇವೇಗೌಡರು ರಾಜೀನಾಮೆ ಬಗ್ಗೆ ಈಗ ಚರ್ಚೆಯ ಅಗತ್ಯವಿಲ್ಲ. ಯಾವುದೇ ರೀತಿಯ ದುಡುಕಿನ ತೀರ್ಮಾನಗಳು ಸದ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ. ನಾನು ನನ್ನ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ಇದು ಯಾವುದೇ ರಾಜಕೀಯ ನಾಟಕವಲ್ಲ ಎಂದು ಸ್ಪಷ್ಟಪಡಿಸಿದರು.
ದೇವೇಗೌಡರಿಗೆ ರಾಜ್ಯದ ಪರ ಧ್ವನಿಯಾಗಿ ಹೋರಾಟ ಮಾಡಲು ಇನ್ನೂ ಶಕ್ತಿಯಿದೆ. ಸಂಸತ್ತಿನಲ್ಲಿ ರಾಜ್ಯದ ಪರ ಹೋರಾಟಕ್ಕೆ ದೇವೇಗೌಡರ ಅಗತ್ಯ ಹೆಚ್ಚಾಗಿದೆ. ಹೀಗಾಗಿ ರಾಜೀನಾಮೆ ಕೊಡುವ ಬಗ್ಗೆ ತೀರ್ಮಾನಿಸಿದ್ದೇನೆ ಎಂದರು.
ರಾಜ್ಯದ ಜನರ ಹಿತ ಮುಖ್ಯ, ಜನರ ತೆರಿಗೆಯ ಹಣವನ್ನು ವ್ಯರ್ಥ ಮಾಡುವ ಯಾವುದೇ ಉದ್ದೇಶವಿಲ್ಲ. ದೊಡ್ಡವರು ತೆಗೆದುಕೊಳ್ಳುವ ತೀರ್ಮಾನವೇ ನನ್ನ ತೀರ್ಮಾನ. ದೇವೇಗೌಡರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿ ನಡೆದುಕೊಳ್ಳುವುದಾಗಿ ಪ್ರಜ್ವಲ್ ಹೇಳಿದರು.
ಎಂಟು ವರ್ಷಗಳಿಂದಲೂ ರಾಜಕೀಯದಲ್ಲಿರುವ ತಮಗೆ ಜನರ ತೆರಿಗೆ ಹಣವನ್ನು ವ್ಯರ್ಥ ಮಾಡಬಾರದು ಎಂಬುದು ತಿಳಿದಿದೆ. ಆದರೆ ರಾಜ್ಯದ ರೈತರ, ಬಡವರ ಹೋರಾಟಕ್ಕೆ ದೇವೇಗೌಡರು ಬೇಕು. ರಾಜ್ಯದ ಹಿತದೃಷ್ಟಿಯಿಂದ ರಾಜೀನಾಮೆಯ ತೀರ್ಮಾನ ಮಾಡಿದ್ದೇನೆ. ಸಂಸತ್ತಿನಲ್ಲಿ ದೇವೇಗೌಡರು ಇದ್ದರೆ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗುತ್ತದೆ. ರಾಜ್ಯಕ್ಕೆ ಅವರು ಮಾಡಬೇಕಾಗಿರುವುದು ಇನ್ನೂ ಸಾಕಷ್ಟಿದೆ ಎಂದರು.
ರಾಜೀನಾಮೆ ನೀಡುವ ಕುರಿತು ಹಾಸನ ಜಿಲ್ಲೆಯ ಜೆಡಿಎಸ್ ಮುಖಂಡರ ಜೊತೆ ಚರ್ಚಿಸಿದ್ದು, ತಂದೆತಾಯಿಗೂ ಈ ಬಗ್ಗೆ ಹೇಳಿದ್ದೇನೆ. ಅವರೆಲ್ಲ ನನ್ನ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ನನ್ನ ನಿರ್ಧಾರದ ಬಗ್ಗೆ ಮೈತ್ರಿ ಪಕ್ಷದ ನಾಯಕರ ಬಳಿಯೂ ಚರ್ಚಿಸುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com