ಸದಾ ರಾಜಕೀಯ ಚಟುವಟಿಕೆಯಿಂದ ಇರುತ್ತಿದ್ದ ದೇವೇಗೌಡರ ಬೆಂಗಳೂರು ಮನೆಯಲ್ಲಿ ಮೋಡ ಕವಿದ ವಾತಾವರಣ!

ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ತಾತ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ...
ಹೆಚ್ ಡಿ ದೇವೇಗೌಡ
ಹೆಚ್ ಡಿ ದೇವೇಗೌಡ
ಹಾಸನ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ತಾತ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಹಾಸನದಲ್ಲಿ ಸ್ಪರ್ಧಿಸುವಂತೆ ಮೊಮ್ಮಗ ಪ್ರಜ್ವಲ್ ರೇವಣ್ಣನ ಡ್ರಾಮಾ ರಾಜಕೀಯ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ನಿನ್ನೆ ವರ್ಗವಾಗಿತ್ತು.
ತಮ್ಮ ತಂದೆ ಸಚಿವ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಜೊತೆ ತಾತ ದೇವೇಗೌಡರ ನಿವಾಸಕ್ಕೆ ನಿನ್ನೆ ಸಂಜೆ ಆಗಮಿಸಿದ ಪ್ರಜ್ವಲ್ ರೇವಣ್ಣನಿಗೆ ತಾತನ ಮನೆಯಲ್ಲಿ ಅಷ್ಟೇನು ಅದ್ದೂರಿ, ಸಂತೋಷದ ಸ್ವಾಗತ ಸಿಗಲಿಲ್ಲ ಎಂದು ತಿಳಿದುಬಂದಿದೆ.
ಪ್ರಜ್ವಲ್ ರೇವಣ್ಣ, ಹೆಚ್ ಡಿ ರೇವಣ್ಣ ಮತ್ತು ಭವಾನಿ ರೇವಣ್ಣ ಮನವೊಲಿಸಲು ಯತ್ನಿಸಿದ್ದಕ್ಕೆ ದೇವೇಗೌಡರು ಒಪ್ಪಲಿಲ್ಲ ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ. ಪ್ರಜ್ವಲ್ ಮತ್ತು ಭವಾನಿ ರೇವಣ್ಣ ದೇವೇಗೌಡರ ಮುಂದೆ ಕಣ್ಣೀರು ಹಾಕಿದರೂ ಕೂಡ ದೊಡ್ಡ ಗೌಡರು ಒಂದು ಶಬ್ದವನ್ನೂ ಮಾತನಾಡದೆ, ಹಣೆ ಮೇಲೆ ಕೈಯಿಟ್ಟುಕೊಂಡು ಸುಮ್ಮನೆ ಕುಳಿತಿದ್ದರು. ಮಗ, ಸೊಸೆ ಮತ್ತು ಮೊಮ್ಮಗನಿಗೆ ಸೋಫಾ ಮೇಲೆ ಕುಳಿತುಕೊಳ್ಳುವಂತೆ ಕೈ ಸನ್ನೆ ಮಾತ್ರ ಮಾಡಿದ್ದಾರೆ ದೇವೇಗೌಡರು. ಇವರ ಭೇಟಿ ಸಂದರ್ಭದಲ್ಲಿ ಅಲ್ಲಿ ದೇವೇಗೌಡರ ಪತ್ನಿ ಚನ್ನಮ್ಮ ಮತ್ತು ಮನೆಯ ಸದಸ್ಯರು ಬಿಟ್ಟರೆ ಅಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.
ತುಮಕೂರು ಕ್ಷೇತ್ರದಲ್ಲಿ ಸೋಲು ಮತ್ತು ಅದರಿಂದ ಆಗಬಹುದಾದ ರಾಜಕೀಯ ಪರಿಣಾಮಗಳಿಂದ ಹಾಸನ ಕ್ಷೇತ್ರದಲ್ಲಿ ಮತ್ತೊಮ್ಮೆ ಚುನಾವಣೆಗೆ ನಿಲ್ಲಬೇಕೆಂಬ ಮೊಮ್ಮಗ ಪ್ರಜ್ವಲ್ ರೇವಣ್ಣರ ಪ್ರಸ್ತಾಪವನ್ನು ದೇವೇಗೌಡರು ತಿರಸ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ದೇವೇಗೌಡರು ಇಲ್ಲ. ತಮ್ಮ ಪುತ್ರ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಏನಾದರೂ ಹೊಸದು ಬೆಳವಣಿಗೆ ಅಥವಾ ಬಿಕ್ಕಟ್ಟು ಆಗುತ್ತದೆಯೇ ಎಂದು ನೋಡಿಕೊಂಡು ಮುಂದುವರಿಯಲಿದ್ದಾರೆ ಎಂದು ಮೂಲಗಳು ಹೇಳುತ್ತವೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ನಾಯಕರು ಮತ್ತು ಜನರ ಪ್ರತಿಕ್ರಿಯೆಗಳನ್ನು ದೇವೇಗೌಡರು ತಮ್ಮ ನಿಷ್ಠಾವಂತರಿಂದ ಪಡೆದುಕೊಳ್ಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಕುಟುಂಬದಲ್ಲಿ ಉಂಟಾಗಬಹುದಾದ ಭಿನ್ನಾಭಿಪ್ರಾಯಗಳ ಬಗ್ಗೆ ಕೂಡ ದೇವೇಗೌಡರಿಗೆ ಆತಂಕವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com