ಕಾಂಗ್ರೆಸ್ ಶಾಸಕಾಂಗ ಸಭೆಗೆ ರೋಷನ್ ಬೇಗ್, ರಮೇಶ್ ಜಾರಕಿಹೊಳಿ ಗೈರು

ಕಾಂಗ್ರೆಸ್ ಅತೃಪ್ತ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ರೋಷನ್ ಬೇಗ್ ರಾತ್ರಿ ನಡೆದ ಶಾಸಕಾಂಗ ಸಭೆಗೆ ಗೈರಾಗಿದ್ದರು
ಕಾಂಗ್ರೆಸ್ ಶಾಸಕಾಂಗ ಸಭೆ
ಕಾಂಗ್ರೆಸ್ ಶಾಸಕಾಂಗ ಸಭೆ

ಬೆಂಗಳೂರು:  ಕಾಂಗ್ರೆಸ್ ಅತೃಪ್ತ ನಾಯಕರಾದ ರಮೇಶ್ ಜಾರಕಿಹೊಳಿ ಹಾಗೂ ರೋಷನ್ ಬೇಗ್  ರಾತ್ರಿ ನಡೆದ ಶಾಸಕಾಂಗ ಸಭೆಗೆ ಗೈರಾಗಿದ್ದರು. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ನಾಯಕರು ಹೇಳುತ್ತಿದ್ದರೂ  79 ಶಾಸಕರ ಕೈಪಿ 72 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಗೈರಾಗಿದ್ದ ಏಳು ಮಂದಿ ಶಾಸಕರ ಪೈಕಿ ಐದು ಮಂದಿ ಕಾರಣ ತಿಳಿಸಿದ್ದಾರೆ. ಆದಾಗ್ಯೂ, ರೋಷನ್ ಬೇಗ್ ಹಾಗೂ ಜಾರಕಿಹೊಳಿ ಸರಿಯಾದ ಕಾರಣ ನೀಡಿಲ್ಲ. ಪಕ್ಷದ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಅವರನ್ನು ಸಂಪರ್ಕಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್  ಕೋಟಾದಡಿಯಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ  ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆ ವರದಿ ನಂತರ ಸಿದ್ದರಾಮಯ್ಯ, ಕೆ. ಸಿ. ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದ ರೋಷನ್ ಬೇಗ್ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ.

ಅತೃಪ್ತ ಶಾಸಕರಾದ ಡಾ. ಸುಧಾಕರ್ , ಬಿ. ನಾಗೇಂದ್ರ, ಮತ್ತು ಬಿ ಸಿ ಪಾಟೀಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಕೆಲವೊಂದು ಕಾರಣದಿಂದ ಕೆಲ ಸದಸ್ಯರು ಗೈರಾಗಿದ್ದಾರೆ. ಆದರೆ, ಅವರ ಗೈರಾದ ಮಾತ್ರಕ್ಕೆ ನಮ್ಮಲ್ಲಿ ಒಗ್ಗಟ್ಟಿಲ್ಲ ಎಂಬ ಅರ್ಥವಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಾಮಲಿಂಗಾರೆಡ್ಡಿ ವಿದೇಶ ಪ್ರವಾಸದಲ್ಲಿದ್ದು, ಬಸವರಾಜ್ ಬೈರತಿ ಆರೋಗ್ಯ ಸರಿಯಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ರಾಜಶೇಖರ್ ಪಾಟೀಲ್ , ರಹೀಂ ಖಾನ್  ಶಾಸಕಾಂಗ ಸಭೆಗೆ ಆಗಮಿಸಿಲ್ಲ ಎಂದು ಅವರು ತಿಳಿಸಿದರು.

72 ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಗೆ ಹಾಜರಾಗದವರು ಕಾರಣ ನೀಡಿ ಪತ್ರ ಬರೆದಿದ್ದಾರೆ. ರೋಷನ್ ಬೇಗ್, ಜಾರಕಿಹೊಳಿ ಕಾರಣ ನೀಡಿಲ್ಲ. ಆದರೆ, ಯಾರೂ ಕೂಡಾ ಪಕ್ಷ ಬಿಡುವುದಿಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ದೇಶದ ಶೇ,20 ರಷ್ಟು ಮತದಾರರು ಕಾಂಗ್ರೆಸ್ ಪರವಾಗಿ ಮತ ಹಾಕಿದ್ದು, ರಾಹುಲ್ ಗಾಂಧಿ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರೆಯಬೇಕು ಎಂದು ಶಾಸಕಾಂಗ ಸಭೆಯಲ್ಲಿ ಒತ್ತಾಯಿಸಲಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com