ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದಿಂದ ಇವಿಎಂಗಳ ಮೇಲೆ ಅನುಮಾನ ಹೆಚ್ಚಾಗಿದೆ: ದಿನೇಶ್ ಗುಂಡೂರಾವ್

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ವಾರದ ಬಳಿಕ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು....
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ವಾರದ ಬಳಿಕ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು ನಮಗೆ ಇವಿಎಂ ಬಗ್ಗೆ ಅನುಮಾನ ಹೆಚ್ಚಾಗುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶುಕ್ರವಾರ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 509 ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಒಂದೊಂದು ಚುನಾವಣೆಯಲ್ಲಿ ಒಂದೊಂದು ರೀತಿಯ ಫಲಿತಾಂಶ ಬರುತ್ತಿದೆ. ಈ ಫಲಿತಾಂಶ ನೋಡಿದರೆ, ಲೋಕಸಭೆ ಚುನಾವಣೆ ಬಗ್ಗೆ ಆಶ್ಚರ್ಯವಾಗುತ್ತಿದೆ ಎಂದಿದ್ದಾರೆ.
ಇವಿಎಂಗಳ ವಿಚಾರದಲ್ಲಿ 370 ಲೋಕಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಹೊಂದಾಣಿಕೆ ಕಂಡು ಬರುತ್ತಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಇನ್ನೂ ಸ್ಪಷ್ಟನೆ ನೀಡಿಲ್ಲ ಎಂದು ಅವರು ಆರೋಪಿಸಿದರು.
15 ದಿನದ ಹಿಂದೆ ನಡೆದ ಲೋಕಸಭೆ ಚುನಾವಣೆಯ ಮತದಾನಕ್ಕೂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆ ನೋಡಿದರೆ ಆಶ್ಚರ್ಯವಾಗುತ್ತಿದೆ. ಆದರೆ ಈ ಫಲಿತಾಂಶ ಪಕ್ಷಕ್ಕೆ ಮತ್ತಷ್ಟು ಶಕ್ತಿ ನೀಡಿದಂತಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಮೊದಲ ಸ್ಥಾನದಲ್ಲಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಕಾಂಗ್ರೆಸ್ ಜನ ಬೆಂಬಲ ಕಳೆದುಕೊಂಡಿದೆ ಎಂದು ಆರೋಪಿಸುತ್ತಿದ್ದ ಬಿಜೆಪಿ ನಾಯಕರು ಈ ಫಲಿತಾಂಶ ನೋಡಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ವೇಳೆ ನಡೆದ ಮತದಾನದ ಸಂಖ್ಯೆ ಹಾಗೂ ಮತ ಎಣಿಕೆ ವೇಳೆ ಬಂದಿರುವ ಅಂಕಿ ಸಂಖ್ಯೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಮತದಾನ ಆಗಿದ್ದಕ್ಕಿಂತ ಹೆಚ್ಚು ಮತಗಳ ಎಣಿಕೆ ಆಗಿದೆ ಎಂಬ ವರದಿ ಬರುತ್ತಿದೆ. ಈ ಬಗ್ಗೆ ಇನ್ನು ಚುನಾವಣಾ ಆಯೋಗ ಉತ್ತರ ಕೊಟ್ಟಿಲ್ಲ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ವಿರೋಧ ಪಕ್ಷಗಳಿಗೆ ತೃಪ್ತಿಕರವಾದ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
ಇವಿಎಂ ಯಂತ್ರಗಳ ದೋಷದ ಬಗ್ಗೆ ಈಗಲೇ ನಾನು ಏನು ಹೇಳುವುದಿಲ್ಲ. ಆದರೆ ಆ ಬಗ್ಗೆ ಒಂದಿಷ್ಟು ಅನುಮಾನಗಳು ನಮಗಿವೆ. ಲೋಕಸಭೆ ಚುನಾವಣಾ ಫಲಿತಾಂಶ ನೋಡಿ ನಾವೆಲ್ಲೋ ತಪ್ಪು ಮಾಡಿದ್ದೇವೆ ಎಂದುಕೊಂಡಿದ್ದೆವು. ಆದರೆ ಜನ ನಮ್ಮನ್ನ ಕೈ ಬಿಟ್ಟಿಲ್ಲ ಎನ್ನುವುದು ನಗರ, ಸ್ಥಳೀಯ ಸಂಸ್ಥೆಗಳ ಫಲಿತಾಂಶದಲ್ಲಿ ಗೋಚರವಾಗಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಎಲ್ಲೆಲ್ಲಿ ಬಹುಮತ ಪಡೆದಿದೆಯೋ ಅಲ್ಲಿ ಅಧಿಕಾರ ಹಿಡಿಯಲಿದ್ದು, ಬಹುಮತ ಇಲ್ಲದ ಕಡೆಗಳಲ್ಲಿ ಜೆಡಿಎಸ್ ಜೊತೆ ಸೇರಿ ಅಧಿಕಾರ ಹಂಚಿಕೊಳ್ಳಲು ಸ್ಥಳೀಯ ನಾಯಕರಿಗೆ ಅಧಿಕಾರ ನೀಡಲಾಗಿದೆ. ಚುನಾವಣಾ ಪೂರ್ವದಲ್ಲಿಯೇ ಪ್ರತ್ಯೇಕವಾಗಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿತ್ತು. ಅಧಿಕಾರ ಹಿಡಿಯಲು ಮೈತ್ರಿ ಅಗತ್ಯವಿದ್ದರೆ ಸ್ಥಳೀಯ  ನಾಯಕರೇ ಅದನ್ನು ತೀರ್ಮಾನಿಸಲಿ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com