ಬಿಜೆಪಿ ಸರ್ಕಾರಕ್ಕೆ ಶತದಿನ: ಬಿ.ಎಸ್. ಯಡಿಯೂರಪ್ಪ ಮುಂದಿವೆ ಹತ್ತು-ಹಲವು ಸವಾಲುಗಳು 

ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ನಡುವೆ ನೂರು ದಿನ ಸರ್ಕಾರದ ಆಡಳಿತ ಪೂರೈಸುವುದು ಪಕ್ಷಗಳಿಗೆ ಮಹತ್ವದ ವಿಷಯವಾಗಿದೆ. 
ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿಗಳ ನಡುವೆ ನೂರು ದಿನ ಸರ್ಕಾರದ ಆಡಳಿತ ಪೂರೈಸುವುದು ಪಕ್ಷಗಳಿಗೆ ಮಹತ್ವದ ವಿಷಯವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮುರಿದುಬಿದ್ದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ಗಳಿಸಿ ನಾಳೆಗೆ 100 ದಿನಗಳಾಗುತ್ತಿದೆ. ಆದರೆ ಸರ್ಕಾರ 100 ದಿನಗಳನ್ನು ಪೂರೈಸಿದ ಸಂಭ್ರಮವನ್ನು ಆಚರಿಸುವ ಮನಸ್ಥಿತಿಯಲ್ಲಿಲ್ಲ. 

ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರ ಹಾದಿ ಹಗ್ಗದ ಮೇಲಿನ ನಡಿಗೆಯಂತೆಯೇ ಇಷ್ಟು ದಿನ ಸಾಗಿದೆ. ಮುಖ್ಯಮಂತ್ರಿಯಾದ ದಿನದಿಂದಲೂ ವಿರಾಮ ತೆಗೆದುಕೊಳ್ಳದೆ ದುಡಿಯುತ್ತಿದ್ದಾರೆ. ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಸಂಪುಟ ವಿಸ್ತರಣೆಯಾಗಲೇ ಇಲ್ಲ, ಹೈಕಮಾಂಡ್ ನಿಂದ ಸೂಚನೆ ಸಿಕ್ಕಿರಲಿಲ್ಲ. ನಂತರ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಬಂದು ಅಪಾರ ನಷ್ಟವುಂಟಾಯಿತು. ಕೇಂದ್ರದಿಂದ ಸರಿಯಾದ ಸಮಯಕ್ಕೆ ಪರಿಹಾರ ಬಿಡುಗಡೆಯಾಗಲಿಲ್ಲ. ಆಗ ಪ್ರತಿಪಕ್ಷಗಳು ಸೇರಿದಂತೆ ನಾಗರಿಕರಿಂದಲೂ ವ್ಯಾಪಕ ಟೀಕೆಗೆ ಗುರಿಯಾಗಬೇಕಾಯಿತು. 


ಹಾಗೆ ನೋಡಿದರೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಗೊಂಡು ಬಂಡಾಯ ಶಾಸಕರ ಬೆಂಬಲದೊಂದಿಗೆ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ತೀವ್ರ ಬರಗಾಲ ಇತ್ತು. ಹೊಸ ಸಿಎಂ ಬಂದು ಸರ್ಕಾರದ ಆಡಳಿತ ಬದಲಾಗುತ್ತಿದ್ದಂತೆ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ರಾಜ್ಯದ 30 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಉಂಟಾಯಿತು.


ರಾಜಕೀಯವಾಗಿಯೂ ಕಳೆದ 100 ದಿನಗಳಲ್ಲಿ ಮುಖ್ಯಮಂತ್ರಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಯಡಿಯೂರಪ್ಪನವರ ಇಚ್ಛೆಗೆ ವಿರುದ್ಧವಾಗಿ ಹೈಕಮಾಂಡ್ ಮೂರು ಉಪ ಮುಖ್ಯಮಂತ್ರಿಗಳನ್ನು ನೇಮಿಸಿತು. ಆದರೆ ಇಂದಿಗೂ ರಾಜ್ಯ ಸಚಿವ ಸಂಪುಟದಲ್ಲಿ ಪೂರ್ಣ ಪ್ರಮಾಣದಲ್ಲಿ ಸಚಿವರುಗಳಿಲ್ಲ. ಗರಿಷ್ಠ 34 ಸಚಿವರುಗಳು ಸಂಪುಟದಲ್ಲಿ ಇರಬಹುದು, ಆದರೆ ಈಗಿರುವುದು ಕೇವಲ 17 ಮಂದಿ ಮಾತ್ರ. ಈಗಿರುವ ಸಚಿವರುಗಳಿಗೆ ಎರಡ್ಮೂರು ಖಾತೆಗಳನ್ನು ನೀಡಿ ಅವರು ಯಾವ ಖಾತೆಯನ್ನು ಕೂಡ ಸರಿಯಾಗಿ ನಿಭಾಯಿಸದಂತಾಗಿದೆ.


ಹಿಂದಿನ ಮೈತ್ರಿ ಸರ್ಕಾರದ ಮಹಾತ್ವಾಕಾಂಕ್ಷೆಯ ರೈತರ ಸಾಲಮನ್ನಾ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟು ಹಣಕಾಸು ಸಂಪನ್ಮೂಲ ಬೇಕು. ಈಗಿರುವ ಸಂಪನ್ಮೂಲಗಳು ಪ್ರವಾಹ ಪರಿಹಾರ ಕೆಲಸಗಳಿಗೆ ಬೇಕಾಗಿದ್ದು ಇದರಿಂದ ಸರ್ಕಾರಕ್ಕೆ ಯಾವುದೇ ಹೊಸ ಮಹತ್ವದ ಯೋಜನೆಗಳನ್ನು ಘೋಷಿಸಲು ಸಾಧ್ಯವಾಗುತ್ತಿಲ್ಲ.


ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ, ಸರ್ಕಾರ ಮೊದಲ 100 ದಿನಗಳ ಆಡಳಿತದಲ್ಲಿ ಇನ್ನೂ ಸಾಕಷ್ಟು ಮಾಡಬಹುದಾಗಿತ್ತು. ಅಧಿಕಾರ ಪಡೆಯಲು ಸರಿಯಾಗಿ ವಿಸ್ತಾರವಾಗಿ ಯೋಚಿಸಿದ್ದ ಭಾರತೀಯ ಜನತಾ ಪಾರ್ಟಿ ಅಧಿಕಾರ ಸಿಕ್ಕಿದ ಮೇಲೆ ಆಡಳಿತದಲ್ಲಿ ಅಷ್ಟು ಉತ್ತಮ ಯೋಜನೆ ಮಾಡಲಿಲ್ಲ ಎನ್ನುತ್ತಾರೆ.


ಮುಂಬರುವ ಉಪ ಚುನಾವಣೆಯಲ್ಲಿ ಗೆಲ್ಲುವುದು ಸಿಎಂ ಮುಂದಿರುವ ಸದ್ಯದ ಬಹುದೊಡ್ಡ ಸವಾಲು. ಸಿದ್ದರಾಮಯ್ಯ ನಾಯಕತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಸರಿಯಾಗಿ ಎದುರು ಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವುದು ಸಾಧ್ಯವಿಲ್ಲದಿದ್ದರೂ ಕೂಡ ಸಾಧ್ಯವಾದಷ್ಟು ಸೀಟುಗಳನ್ನು ಗೆದ್ದು ರಾಜಕೀಯವಾಗಿ ಬಿಜೆಪಿ ಎದುರು ಪ್ರಾಬಲ್ಯ ಮೆರೆಯಲು ನೋಡುತ್ತಿದೆ.


ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಾಳೆ ಮೊದಲ 100 ದಿನಗಳ ಸಂಭ್ರಮವನ್ನು ಸರಳವಾಗಿ ಆಚರಿಸಲು ಉದ್ದೇಶಿಸಿದೆ ಎಂದು ತಿಳಿದುಬಂದಿದೆ. ಆಡಳಿತಾರೂಢ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಸರಳವಾಗಿ ಸರ್ಕಾರದ ಮೊದಲ ನೂರು ದಿನದ ಆಚರಣೆಯನ್ನು ನಡೆಸಲು ಚಿಂತನೆ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com