ಇತಿಹಾಸ ತಿರುಚುವುದು, ಸುಳ್ಳು ಹೇಳುವುದು ಬಿಜೆಪಿಯ ಜನ್ಮಸಿದ್ಧ ಹಕ್ಕು: ಸಿದ್ದರಾಮಯ್ಯ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆಗೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ನೂರು ದಿನದ ಸಾಧನೆಗೆ ನಾನು ಸೊನ್ನೆ ಅಂಕ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ. 

ಇಂದು ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನೆರೆ ಸಂತ್ರಸ್ತರ ವಿಚಾರದಲ್ಲಿ ನಾನು ದಾಖಲೆ, ಮಾಹಿತಿ ಇಲ್ಲದೇ ಯಾವುದೇ ಮಾತು ಆಡಿಲ್ಲ. ಅಧಿಕಾರಿಗಳಿಂದ ವಿವರ ಪಡೆದು, ಸ್ಥಳ ಪರಿಶೀಲಿಸಿ ಮಾತಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಸಿದ್ದರಾಮಯ್ಯ ಇದ್ದಿದ್ದರೆ ಅವರನ್ನೂ ಮತಾಂತರ ಮಾಡುತ್ತಿದ್ದರು. ಆಗ ಸಿದ್ದರಾಮಯ್ಯನವರ ಹೆಸರು ಅಬ್ದುಲ್ ಸಿದ್ದರಾಮಯ್ಯ ಆಗಿರುತ್ತಿತ್ತು ಎಂಬ ಸಚಿವ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಬಗ್ಗೆ ಟೀಕಿಸುವ, ಆತನನ್ನು ವಿರೋಧಿಸುವ ಬಿಜೆಪಿ ನಾಯಕರೇ ಟಿಪ್ಪು ಸುಲ್ತಾನ್ ಪೇಟ ಧರಿಸಿ, ಕತ್ತಿ ಹಿಡಿದು ಫೋಟೋಗೆ ಪೋಸ್ ನೀಡಿದ್ದನ್ನು ಮರೆತಂತಿದೆ. 'ಮಿಸ್ಟರ್ ಅಶೋಕ್, ಟಿಪ್ಪು ಪೇಟ ಧರಿಸಿದವರಾರು? ಸಿಎಂ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಎಲ್ಲರೂ ಪೇಟ ಹಾಕಿರಲಿಲ್ಲವೇ?' ಎಂದು ತಿರುಗೇಟು ನೀಡಿದ್ದಾರೆ.

ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆಯುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಇತಿಹಾಸ ತಿರುಚುವುದು, ಸುಳ್ಳು ಹೇಳುವುದು ಬಿಜೆಪಿಯ ಜನ್ಮಸಿದ್ಧ ಹಕ್ಕು. ಟಿಪ್ಪುವನ್ನು ಪಠ್ಯದಿಂದ ಕೈಬಿಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ ಯಡಿಯೂರಪ್ಪನವರು ಈ ಹಿಂದೆ ಟಿಪ್ಪು ಪೇಟ ಧರಿಸಿ ನಾನೇ ಟಿಪ್ಪು ಅಂತ ಹೇಳಿದ್ದರು. ಅಶೋಕ್ ಅವರು ಈ ಬಗ್ಗೆಯೂ ಮಾತನಾಡಲಿ. ಆಗ ಯಾರು ಅಬ್ದುಲ್ ಎಂಬುದು ಗೊತ್ತಾಗುತ್ತದೆ. ಗೋವಿಂದ ಕಾರಜೋಳ ಟಿಪ್ಪು ಬಗ್ಗೆ ಏನೆಂದು ಬರೆದಿದ್ದಾರೆ ಗೊತ್ತಾ? ಜಗದೀಶ್ ಶೆಟ್ಟರ್​ ಸಿಎಂ ಆಗಿದ್ದಾಗ ಟಿಪ್ಪು ಪುಸ್ತಕದ ಮುನ್ನುಡಿಯಲ್ಲಿ ಟಿಪ್ಪುವನ್ನು ಶೆಟ್ಟರ್​ ಹಾಡಿ ಹೊಗಳಿದ್ದರು. ಅದನ್ನೆಲ್ಲ ಬಿಜೆಪಿಯವರು ಮರೆತಿರಬಹುದು, ಆದರೆ ನಾವು ಮರೆತಿಲ್ಲ ಎಂದರು.

ಉಪ ಚುನಾವಣೆ ಬಂದಿರುವುದರಿಂದ ಬಿಜೆಪಿಯವರು ಈ ವಿಚಾರ ಎತ್ತಿದ್ದಾರೆ. ಚುನಾವಣೆ ಮಾಡಲಿ ಆದರೆ ಇತಿಹಾಸ ತಿರುಚುವುದು ಬೇಡ. ಭಾವನಾತ್ಮಕ ವಿಚಾರಗಳನ್ನು ಇಟ್ಟುಕೊಂಡು ಚುನಾವಣೆ ನಡೆಸುವುದು ಬೇಡ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com