ಇಂದು 17 ಶಾಸಕರ ರಾಜಕೀಯ ಭವಿಷ್ಯ ನಿರ್ಧರಿಸುವ ಸುಪ್ರೀಂ: ದೆಹಲಿಯಲ್ಲಿ ಬೀಡುಬಿಟ್ಟ ಅನರ್ಹ ಶಾಸಕರು

15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ ೫ ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವ ಭವಿಷ್ಯ ಕುರಿತು ಬುಧವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡುವ ನಿರೀಕ್ಷೆಯಿದೆ.
ಅನರ್ಹ ಶಾಸಕರು
ಅನರ್ಹ ಶಾಸಕರು

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ ೫ ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸುವ ಭವಿಷ್ಯ ಕುರಿತು ಬುಧವಾರ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡುವ ನಿರೀಕ್ಷೆಯಿದೆ.

ಸುಪ್ರೀಂಕೋರ್ಟ್ ತೀರ್ಪಿನತ್ತ ಇಡೀ ರಾಜ್ಯದ ಗಮನ ನೆಟ್ಟಿದೆ. ಚುನಾವಣೆ ಮುಂದೂಡುವಂತೆ ಕೋರಿ ಅನರ್ಹ ಶಾಸಕರು ಬುಧವಾರವೇ ಅರ್ಜಿ ಸಲ್ಲಿಸಲಿದ್ದು, ಇದನ್ನು ತಕ್ಷಣವೇ ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್ ತೀರ್ಮಾನಿಸಿದೆ.

ಹುಣಸೂರು,ಕೆ.ಆರ್.ಪೇಟೆ,ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಕೆ.ಆರ್.ಪುರಂ, ಗೋಕಾಕ್, ಕಾಗವಾಡ ಸೇರಿದಂತೆ 15 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಮುಂದೂಡುವಂತೆ ಕಳೆದ ವಾರ ಅನರ್ಹ ಶಾಸಕರ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು.

ಆದರೆ ಉಪಚುನಾವಣೆಯನ್ನು ಮುಂದೂಡಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದ್ದಲ್ಲದೆ ನಿಮಗಾಗಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತೀರ್ಪು ನೀಡಲಿದ್ದು, ಅಂದೇ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸೋಣ ಎಂದು ಕೋರ್ಟ್ ಸೂಚನೆ ನೀಡಿತ್ತು.

ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗಲಿದ್ದು, ಅದೇ ಕಾಲಕ್ಕೆ ಚುನಾವಣೆ ಮುಂದೂಡುವಂತೆ ಶಾಸಕರು ಮಾಡಿಕೊಳ್ಳಲಿರುವ ಮನವಿಗೆ ಸಂಬಂಧಿಸಿದ ವಿಚಾರಣೆಯೂ ನಡೆಯಲಿದೆ.

ಹಿಂದಿನ ವಿಧಾನಸಭೆಯ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರು ಕಾಂಗ್ರೆಸ್‍ನ 13, ಜೆಡಿಎಸ್ 3 ಹಾಗೂ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರ ಜೊತೆಗೆ ಈ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅವರು ಯಾವುದೇ ರೀತಿಯ ಸಾಂವಿಧಾನಿಕ ಸ್ಥಾನ ಅಲಂಕರಿಸುವಂತಿಲ್ಲ ಮತ್ತು ವಿಧಾನಸಭೆ ಪ್ರವೇಶಿಸುವಂತಿಲ್ಲ ಎಂದು ಆದೇಶಿಸಿದ್ದರು.

ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಎರಡೂ ಕಡೆಯ ವಾದವನ್ನು ಆಲಿಸಿರುವ ಸುಪ್ರೀಂಕೋರ್ಟ್ ನಾಳೆ ಬೆಳಗ್ಗೆ 10.30ಕ್ಕೆ ಅಂತಿಮ ತೀರ್ಪು ಪ್ರಕಟಿಸಲಿದೆ. ತೀರ್ಪಿಗೆ ಕ್ಷಣಗಣನೆ ಆರಂಭವಾಗಿರುವಂತೆ ಅನರ್ಹರಲ್ಲಿ ಆತಂಕ ಹೆಚ್ಚಾಗಿದೆ. ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ನೀಡಲಿದೆಯೋ? ಇಲ್ಲವೇ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಲಿದೆಯೋ ? ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಿದೆಯೋ? ಇಲ್ಲವೋ ಎಂಬ ಆತಂಕದಲ್ಲಿದ್ದಾರೆ.

ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com