17 ಅನರ್ಹ ಶಾಸಕರ ತ್ಯಾಗದಿಂದ ನಾನು ಸಿಎಂ ಆದೆ, ಅವರು ಭಾವಿ ಸಚಿವರು: ಬಿಎಸ್ ವೈ

ಕಾಂಗ್ರೆಸ್ - ಜೆಡಿಎಸ್ ನ 17 ಅನರ್ಹ ಶಾಸಕರ ತ್ಯಾಗದಿಂದ ನಾನು ಮತ್ತೆ ಮುಖ್ಯಮಂತ್ರಿಯಾದೆ. ಅವರೇ ಭಾವಿ ಶಾಸಕರು ಮತ್ತು ಸಚಿವರು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರವಾರ ಹೇಳಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್ - ಜೆಡಿಎಸ್ ನ 17 ಅನರ್ಹ ಶಾಸಕರ ತ್ಯಾಗದಿಂದ ನಾನು ಮತ್ತೆ ಮುಖ್ಯಮಂತ್ರಿಯಾದೆ. ಅವರೇ ಭಾವಿ ಶಾಸಕರು ಮತ್ತು ಸಚಿವರು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಗುರವಾರ ಹೇಳಿದ್ದಾರೆ.

ಇಂದು 17 ಅನರ್ಹ ಶಾಸಕರ ಪೈಕಿ 16 ಅನರ್ಹ ಶಾಸಕರನ್ನು ಅಧಿಕೃತವಾಗಿ ಬಿಜೆಪಿಗೆ ಬರಮಾಡಿಕೊಂಡ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, 17 ಅನರ್ಹ ಶಾಸಕರ ತ್ಯಾಗದಿಂದ ನಾನು ಸಿಎಂ ಆದೆ. ಕೆಲವರು ಸಚಿವ ಸ್ಥಾನ ಬಿಟ್ಟು ಬಂದಿದ್ದಾರೆ. ಹೀಗಾಗಿ ರಾಜೀನಾಮೆ ಕೊಟ್ಟು ನಮ್ಮ ಜೊತೆಗೆ ಬಂದ ಎಲ್ಲಾ 17 ಶಾಸಕರಿಗೆ ನಾವು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ವಿಶ್ವಾಸ ದ್ರೋಹ ಮಾಡಲ್ಲ ಎಂದು ಹೇಳುವ ಮೂಲಕ ಅನರ್ಹ ಶಾಸಕರಲ್ಲಿ ಭರವಸೆ ನೀಡಿದರು.

ಇಂದಿನ ಅನರ್ಹ ಶಾಸಕರು ನಾಳೆಯ ಭಾವಿ ಶಾಸಕರು ಹಾಗೂ ಭಾವಿ ಸಚಿವರು. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎನ್ನುವ ಮೂಲಕ ಸಿಎಂ ಅನರ್ಹ ಶಾಸಕರಲ್ಲಿ ವಿಶ್ವಾಸ ತುಂಬುವ ಮಾತುಗಳನ್ನು ಆಡಿದರು.

ದೇಶದ ರಾಜಕಾರಣದಲ್ಲಿ ಈ ರೀತಿ 16–17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಉದಾಹರಣೆ ಇಲ್ಲ. ನಮಗಾಗಿ ಎಲ್ಲ ರೀತಿಯ ತ್ಯಾಗ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೈಜೋಡಿಸಿ ಮನವಿ ಮಾಡುತ್ತೇನೆ. ಒಡಕಿನ ಮಾತು ಆಡದೆ ಎಲ್ಲ ರೀತಿಯ ಸಹಕಾರ ನೀಡಿ, ತನು ಮನ ಧನದಿಂದ ಅವರ ಗೆಲುವಿಗೆ ಕಾರಣಕರ್ತರಾಗಿ ಎಂದು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಸಿಎಂ ಮನವಿ ಮಾಡಿದರು. 

15 ಕ್ಷೇತ್ರಗಳಿಗೆ ಡಿ.5 ರಂದು ಉಪ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 9ಕ್ಕೆ ಫಲಿತಾಂಶ ಹೊರಬೀಳಲಿದೆ. ಗೆದ್ದ ಎಲ್ಲ ಶಾಸಕರಿಗೆ ದೊಡ್ಡ ಮೈದಾನದಲ್ಲಿ 1 ಲಕ್ಷ ಜನರನ್ನು ಸೇರಿಸಿ ಸನ್ಮಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಮಾಜಿ ಶಾಸಕರಿಗೆ ನಾನು ಭರವಸೆ ಕೊಡುತ್ತೇನೆ, 15ಕ್ಕೆ 15 ಕ್ಷೇತ್ರಗಳಲ್ಲಿ ನೂರಕ್ಕೆ ನೂರು ಗೆಲುವು ಸಾಧಿಸುತ್ತೇವೆ. ಇದು ನನ್ನ ಭರವಸೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com