ರೆಸಾರ್ಟ್'ನಲ್ಲಿದ್ದಾಗಲೇ ಸರ್ಕಾರ ಉರುಳಿಸಲು ನಿರ್ಧರಿಸಿದ್ದೆ: ರಮೇಶ್ ಜಾರಕಿಹೊಳಿ ರಹಸ್ಯ ಸ್ಫೋಟ

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಸರ್ಕಾರ ಕೆಡವಿದ್ದು ಹೇಗೆ ಮತ್ತು ಏಕೆ ಎಂಬ ಸ್ಫೋಟಕ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ...
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಡವಿ, ಬಿಜೆಪಿ ನೇತೃತ್ವದ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋಕಾಕ ಕ್ಷೇತ್ರದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಸರ್ಕಾರ ಕೆಡವಿದ್ದು ಹೇಗೆ ಮತ್ತು ಏಕೆ ಎಂಬ ಸ್ಫೋಟಕ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ. 

ಸುಪ್ರೀಂಕೋರ್ಟ್ ತೀರ್ಪು ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರ ಗೋಕಾಕ್'ಗೆ ಆಗಮಿಸಿದ ರಮೇಶ್ ಜಾರಕಿಹೊಳಿಯವರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಸ್ವಾಗತ ಸಮವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಸಿರು ನಿಶಾನೆ ತೋರಿದ ಬಳಿಕವೇ ಮೈತ್ರಕಿ ಸರ್ಕಾರ ಕೆಡವಲು ಮುಂದಾದೆ ಎಂದು ಹೇಳಿದ್ದಾರೆ. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕೈಗೆ ಪಕ್ಷ ನೀಡುವ ಪಿತೂರಿ ನಡೆದಾಗಲೇ ಮೈತ್ರಿ ಸರ್ಕಾರವನ್ನು ಕೆಡವಲು ನಿರ್ಧರಿಸಿದ್ದೆವು. ನಾವು 7-8 ಬಾರಿ ನಡೆಸಿದ ಪ್ರಯತ್ನ ವಿಫಲಗೊಂಡಿತ್ತು. 2018ರಲ್ಲಿ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಶಾಸಕರು ಎಲ್ಲರೂ ಬೆಂಗಳೂರು ಬಳಿ ಬಿಡದಿ ರೆಸಾರ್ಟ್'ಗೆ ಹೋಗಿದ್ದರು. ಜಿಲ್ಲೆಯಿಂದ ನಮಗಿಂತ ಮೊದಲೇ ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮೀ ಹೆಬ್ಬಾಳ್ಕರ್ ಹೋಗಿದ್ದರು. ಆಗಲೇ ನನ್ನ ವಿರುದ್ಧ ಕುತಂತ್ರ ನಡೆದಿತ್ತು. ಕೊನೆಗೆ ನಾನು, ಮಹೇಶ ಕುಮಟಳ್ಳಿ, ಶ್ರೀಮಂತ ಪಾಟೀಲ ಅಲ್ಲಿಗೆ ಹೋದೆವು. ಆಗ ವಿಚಿತ್ರ ಸನ್ನಿವೇಶ ನಡೆದಿತ್ತು. ಆಗ ಎಲ್ಲವೂ ಡಿಕೆಶಿ ಆಡಳಿತವೇ ನಡೀತಿತ್ತು. 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಬಿ ನಾವು ರಾಜಕೀಯ ಮಾಡಿದ್ದೆವು. ಆದರೆ, ಅವರನ್ನೇ ಸೈಡ್ ಮೈನ್ ಮಾಡಿ. ಸಚಿವ ಡಿಕೆ.ಶಿವಕುಮಾರ್ ಕೈಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕೊಡುವ ಪಿತೂರಿ ಕೂಡ ನಡೆದಿತ್ತು. ಇದರಿಂದ ಅಸಮಾಧಾನ ಹೊಂದಿ ನಾನು ಮತ್ತು ಶಾಸಕ ಶಂಕರ್ ಸೇರಿಕೊಂಡು 2018ರ ಮೇ.15ರನೇ ಮೈತ್ರಿ ಸರ್ಕಾರ ಬೀಳಿಸುವ ನಿರ್ಧಾರ ಕೈಗೊಂಡೆವು. ಇದಾದ ಬಳಿಕ ಮೊದಲ ಬಾರಿ ಯಡಿಯೂರಪ್ಪ ಅವರ ಜೊತೆಗೆ ಮಾತುಕತೆ ನಡೆಸಿದ್ದೆ. ಆಗ ಯಡಿಯೂರಪ್ಪ ಅವರು, ರಮೇಶ್ ನಿನ್ನ ನಂಬಬಹುದಾ? ಎಂದು ಕೇಳಿದ್ದರು. ಇದಕ್ಕೆ ನಾನು ಮುಳುಗಲಿ ತೇಲಲಿ ನನ್ನ ನಂಬಿ ಎಂದು ಹೇಳಿದ್ದೆ ಎಂದು ತಮ್ಮ ಅನುಭವದ ವೃತ್ತಾಂತವನ್ನು ಬಿಚ್ಚಿಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com