ನಾನು ತೆರಿಗೆ ವಂಚಕ ಅಲ್ಲ, ವ್ಯವಹಾರದಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುತ್ತೇನೆ: ಎಂಟಿಬಿ ನಾಗರಾಜ್

ರಾಜಕಾರಣದ ಜತೆಗೆ ತಾವು ಉದ್ಯಮಿಯಾಗಿದ್ದು, ತಿಂಗಳಿಗೆ ಕೋಟ್ಯಾಂತರ ರೂಪಾಯಿ ವರಮಾನ ಬರುತ್ತಿರುವ ಕಾರಣ ಆದಾಯ ಹೆಚ್ಚಾಗಿದೆ. ತಮ್ಮ ವ್ಯವಹಾರದಲ್ಲಿ ಏನಾದರೂ ಸಣ್ಣ-ಪುಟ್ಟ ತಪ್ಪುಗಳಿದ್ದರೆ ಅದನ್ನು...
ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್

ಬೆಂಗಳೂರು: ರಾಜಕಾರಣದ ಜತೆಗೆ ತಾವು ಉದ್ಯಮಿಯಾಗಿದ್ದು, ತಿಂಗಳಿಗೆ ಕೋಟ್ಯಾಂತರ ರೂಪಾಯಿ ವರಮಾನ ಬರುತ್ತಿರುವ ಕಾರಣ ಆದಾಯ ಹೆಚ್ಚಾಗಿದೆ. ತಮ್ಮ ವ್ಯವಹಾರದಲ್ಲಿ ಏನಾದರೂ ಸಣ್ಣ-ಪುಟ್ಟ ತಪ್ಪುಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಅನರ್ಹ ಶಾಸಕ, ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂ.ಟಿ.ಬಿ. ನಾಗರಾಜ್ ಅವರು ಶನಿವಾರ ಹೇಳಿದ್ದಾರೆ.

ತಮ್ಮ 15ಕ್ಕೂ ಹೆಚ್ಚು ಖಾತೆಗಳಲ್ಲಿ 50 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿದೆ ಎಂಬ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾಳಪ್ಪ ಅವರು ಬೇಕಿದ್ದರೆ ಐಟಿ ಇಲಾಖೆಯಿಂದ ಮಾಹಿತಿ ಕೇಳಿ ವಿವರ ಪಡೆದುಕೊಳ್ಳಲಿ. ನಾನು ಯಾವುದೇ ಅಕ್ರಮ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.

ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತೆರಿಗೆ ವಂಚಕ ನಾನಲ್ಲ. ಆದಾಯಕ್ಕೆ ತಕ್ಕಂತೆ ತೆರಿಗೆ ಪಾವತಿಸುತ್ತಿದ್ದೇನೆ. ತೆರಿಗೆ ಕಟ್ಟದೇ ವಂಚಿಸುವವರು ದೇಶ ದ್ರೋಹಿಗಳು. ನಾನು ಯಾವುದೇ ರೀತಿಯ ತೆರಿಗೆಯನ್ನು ಬಾಕಿ ಉಳಿಸಿಕೊಂಡಿಲ್ಲ ಎಂದರು.

ಇಷ್ಟಕ್ಕೂ ಹಣದ ಆಮೀಷಕ್ಕೆ ಒಳಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅದರ ಅಗತ್ಯವೂ ನನಗಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜಿನಾಮೆ ನೀಡಿ ಚುನಾವಣೆ ಎದುರಿಸುತ್ತಿದ್ದೇನೆ ಎಂದರು. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೊಸಕೋಟೆಯಲ್ಲಿ ಬಂದು ಪ್ರಚಾರ ಮಾಡಿದರೆ ನಾನೇಕೆ ಹೆದರಿಕೊಳ್ಳಲಿ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನನಗೆ ಎದುರಾಳಿಗಳೇ ಅಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com